ಮೈಸೂರು: ಕೃಷ್ಣರಾಜ ಸಾಗರ ಜಲಾಶಯದ ಬಳಿ ಜುಲೈ 15ರವರೆಗೆ ಪ್ರಾಯೋಗಿಕ ಸ್ಫೋಟ ನಡೆಸದಂತೆ ಅಧಿಕಾರಿಗಳಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೂಚನೆ ನೀಡಿದ್ದಾರೆ
ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಬೇಬಿಬೆಟ್ಟ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಸಂಬಂಧ ರೈತ ನಾಯಕರೊಂದಿಗೆ ನಡೆದ ಸಭೆಯಲ್ಲಿ ಅಭಿಪ್ರಾಯ ಆಲಿಸಿ ಮಾತನಾಡಿದರು.
ಕೆಆರ್‌ಎಸ್ ಅಣೆಕಟ್ಟೆ ಸಂರಕ್ಷಣೆ ಸರಕಾರದ ಹೊಣೆಯಾಗಿದೆ. ಅಣೆಕಟ್ಟೆಗೆ ಅಪಾಯವಾದರೆ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತಿದೆ ಎನ್ನುವುದು ಗೊತ್ತಿದೆ. ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಕೋರ್ಟ್ ಸೂಚನೆ ನೀಡಿರುವುದರಿಂದ ಅಡ್ವಕೇಟ್ ಜನರಲ್, ಡ್ಯಾಮ್ ಸೇಫ್ಟಿ ಕಮಿಟಿ, ಉನ್ನತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಜುಲೈ 15ರಂದು ಕೋರ್ಟ್‌ಗೆ ಸಮಗ್ರ ಮಾಹಿತಿ ನೀಡಲಾಗುವುದು. ಗೊಂದಲ ಬಗೆಹರಿಯದಿದ್ದರೆ ಮತ್ತೆ ಸಮಯಾವಕಾಶ ಕೇಳಲಾಗುವುದು ಎಂದು ಹೇಳಿದರು.
ರೈತರ ಅಭಿಪ್ರಾಯ ಕುರಿತಂತೆ ಚರ್ಚಿಸಲು ಶೀಘ್ರವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುವುದು. ಸಭೆಗೆ ಆಯ್ದ ಐದು ಜನ ರೈತ ಮುಖಂಡರನ್ನು ಸಹ ಆಹ್ವಾನಿಸಲಾಗುವುದು. ತಾಂತ್ರಿಕ ಸಮಿತಿ ಹಾಗೂ ಅಕಾರಿಗಳ ಅಭಿಪ್ರಾಯ ಬೇರೆ ಬೇರೆ ಇರುತ್ತದೆ. ಎಲ್ಲ ಸಿದ್ಧತೆ ಮಾಡಿಕೊಂಡು ಕೋರ್ಟ್ ಮುಂದೆ ಹೋಗುತ್ತೇವೆ. ಹೀಗಾಗಿ ಜುಲೈ 15 ರವರೆಗೆ ಯಾವುದೇ ಟ್ರಯಲ್ ಬ್ಲಾಸ್ಟ್ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.