ಬೆಂಗಳೂರು: “ನಂದಿನಿ ಬ್ರ್ಯಾಂಡ್’ ನಡಿ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಕೆಎಂಎಫ್ ಶೀಘ್ರದಲ್ಲೇ ನಂದಿನಿ ದೋಸೆ ಹಿಟ್ಟು ಬಿಡುಗಡೆ ಮಾಡಲಿದೆ. ಪ್ರೋಟಿನ್ ಅಂಶಗಳನ್ನು ಒಳಗೊಂಡಂತಹ ನಂದಿನಿ ದೋಸೆ ಹಿಟ್ಟಿನ ಪ್ರಯೋಗ ನಡೆದಿದ್ದು, ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಮಾರುಕಟ್ಟೆಗೆ ಪರಿಚಯಿಸುವ ಕಾರ್ಯ ಕೂಡ ವೇಗವಾಗಿ ನಡೆದಿವೆ.
ಸಾಮಾನ್ಯವಾಗಿ ದೋಸೆ ಹಿಟ್ಟು ತಯಾರಿಕೆಯಲ್ಲಿ ಅಕ್ಕಿ-ಉದ್ದಿನ ಬೆಳೆಯನ್ನು ಹಾಕಿ ಸಿದ್ಧಪಡಿಸಲಾಗುತ್ತದೆ. ಆದರೆ, ನಂದಿನಿ ಬ್ರ್ಯಾಂಡ್‌ನಲ್ಲಿ ಹಾಲಿನ ಉಪ ಉತ್ಪನ್ನ “ವೇ ಪೌಡರ್’ ಸೇರಿದಂತೆ ಗೋಧಿ ಬೆರೆಸಿ ತಯಾರಿಸಲಾಗುತ್ತದೆ . ”ರೆಡಿ ಟು ಕುಕ್’ ಮಾದರಿಯಲ್ಲಿ ಗ್ರಾಹಕರಿಗೆ ನೇರವಾಗಿ 1 ಅಥವಾ 2 ಕೇಜಿ ಪಾಕೇಟ್‌ನಲ್ಲಿ ಪೂರೈಕೆ ಮಾಡಲಾಗುತ್ತದೆ. ಇತರೆ ದೋಸೆ ಹಿಟ್ಟಿಗಿಂತ ಹೆಚ್ಚು ಗುಣಮಟ್ಟದಿಂದ ಕೂಡಿರಲಿದೆ.
ಇದರ ಬೆಲೆ ಕೂಡ ಕೈಗೆಟಕುವಂತೆ ಇರಲಿದೆ. ಹಿಟ್ಟಿನ ಪ್ಯಾಕಿಂಗ್ ಸೇರಿದಂತೆ ಮತ್ತತಿರರ ಪ್ರಯೋಗ ಕೂಡ ಪೂರ್ಣಗೊಂಡಿದೆ. ಶೀಘ್ರದಲ್ಲೇ ಗ್ರಾಹಕರ ಕೈಗೆ ತಲುಪಿಸಲಾಗುತ್ತದೆ ಎಂದು ಕೆಎಂಎಫ್ನ ನಿರ್ದೇಶಕ ಎಂ.ಕೆ.ಜಗದೀಶ್ ಮಾಹಿತಿ ನೀಡಿದ್ದಾರೆ.ಈಗಾಗಲೇ ಖಾಸಗಿ ಕಂಪನಿಗಳು ಕೂಡ ಭಿನ್ನ ರೀತಿಯ ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿವೆ. ಆದರೆ, ಅದಕ್ಕಿಂತಲೂ ನಂದಿ ಬ್ರ್ಯಾಂಡ್ ದೋಸೆ ಹಿಟ್ಟು ಭಿನ್ನವಾಗಿರಲಿದೆ ಎಂದರು.
ಪ್ರಾಯೋಗಿಕ ಪರೀಕ್ಷೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ
ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನಡಿ ಕೇವಲ ಹಾಲು , ಹಾಲಿನ ಉತ್ಪನ್ನಗಳ ಉತ್ಪಾದನೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದೋಸೆ ಹಿಟ್ಟು ಉತ್ಪಾದಿಸಲು ನಿರ್ಧರಿಸಿದೆ. ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ.
ಈಗಾಗಲೇ ಟೆಂಡರ್ ಕೂಡ ಪೂರ್ಣ ಗೊಂಡಿದೆ. “ರೆಡಿ ಟು ಕುಕ್’ ಪರಿಕಲ್ಪನೆಯಡಿ ಜನರು ಸುಲಭ ವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಕೆಎಂಎಫ್ ಈಗಾಗಲೇ 150ಕ್ಕೂ ಅಧಿಕ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡು ತ್ತಿದೆ. ಇದೀಗ ದೋಸೆ ಹಿಟ್ಟು ಮಾರಾಟಕ್ಕೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅತಿ ಶೀಘ್ರದಲ್ಲೇ ಗ್ರಾಹಕರ ಕೈಗೆ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟು ಕೈ ಸೇರಲಿದೆ.
–ಎಂ.ಕೆ.ಜಗದೀಶ್, ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್.