ಕಡಬ: ಪಂಜದ ಪುಳಿಕುಕ್ಕು ಎಂಬಲ್ಲಿ ಇಂದು ಬೆಳಗ್ಗೆ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಸಿಲುಕಿ, ಸಹಾಯಕ್ಕಾಗಿ ಬೊಬ್ಬೆ ಹಾಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ತಂಡ ಸ್ಥಳೀಯರ ನೆರೆವಿನೊಂದಿಗೆ ರಕ್ಷಿಸಿದ ಘಟನೆ ನಡೆದಿದೆ.
ತನ್ನನ್ನು ತಾನು ಮಾರತ್ ಹಳ್ಳಿಯ ವಿಶ್ವನಾಥ ಅವರ ಪುತ್ರ ರವಿ (೪೦)ಎಂದು ಪರಿಚಯಿಸಿಕೊಂಡಿದ್ದಾನೆ. ಪುಳಿಕುಕ್ಕುವಿನಲ್ಲಿ ಕುಮಾರಧಾರ ನದಿ ಬಹುತೇಕ ತುಂಬಿ ಹರಿಯುತ್ತಿದೆ. ಇಂದು ಸೋಮವಾರ ಬೆಳಗ್ಗೆ ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ರಕ್ಷಿಸುವಂತೆ ಬೊಬ್ಬೆ ಹಾಕುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಡಬ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಅದರಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯುವಕನನ್ನು ನದಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಬಳಿಕ ಆತನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆತನಿಗೆ ಸೇರಿದ್ದೆನ್ನಲಾದ ಬ್ಯಾಗ್ ಪುಳಿಕುಕ್ಕು ಬಸ್ ನಿಲ್ದಾಣದ ಬಳಿ ದೊರೆತಿದೆ. ಆತ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.