ನಂಜನಗೂಡು: ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಎಂಬ ಮೂರು ಅಂಗಗಳಿದ್ದು, ನಾಲ್ಕನೇ ಅಂಗವಾಗಿ ಪತ್ರಿಕಾರಂಗವಿದೆ. ಪತ್ರಕರ್ತರಿಗೆ ಉತ್ತಮ ಜವಾಬ್ದಾರಿಯಿದ್ದು, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಹಾಗೂ ಸರ್ಕಾರಗಳ ವೈಫಲ್ಯವನ್ನು ಎತ್ತಿಹಿಡಿಯುವ ಮೂಲಕ ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ಅವರು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಶ್ರೀ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳು ತಮ್ಮ ಜವಾಬ್ದಾರಿ ಅರಿತು ಉತ್ತಮವಾದ ಬರವಣಿಗೆಗಳನ್ನು ನೀಡುವುದರ ಮೂಲಕ ಜನರು ಇಂದಿಗೂ ವಿಶ್ವಾಸ ಉಳಿಸಿಕೊಂಡು ನೈಜ ಸಂಗತಿಗಳನ್ನು ತಿಳಿಯಲು ಪತ್ರಿಕೆಗಳು ಸಹಕಾರಿಯಾಗಿವೆ. ಹೀಗಾಗಿ ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಪತ್ರಿಕೆಗಳ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಗ್ರಾಮಗಳಲ್ಲಿ ಜನಸ್ಪಂದನೆಯಂತಹ ಕಾರ್ಯಕ್ರಮಗಳಲ್ಲಿ ಪತ್ರಕರ್ತರು ಪಾಲ್ಗೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳ ಮತ್ತು ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳ ಜೊತೆ ಸಹಕಾರ ನೀಡುತ್ತಿರುವುದರಿಂದ ಕ್ಷೇತ್ರದ ಅಭಿವೃದ್ದಿ ಉತ್ತಮವಾಗಿ ನಡೆಯುತ್ತದೆ ಎಂದರು. ಉತ್ತಮ ಆಡಳಿತಕ್ಕೆ ಮತ್ತು ಬಡವರ ಅಭಿವೃದ್ದಿಗಾಗಿ ಪತ್ರಕರ್ತರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಸುತ್ತೂರು ಶ್ರೀ ಕ್ಷೇತ್ರದಿಂದ ಪತ್ರಕರ್ತರಿಗೆ ಶ್ರೀ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ ಅವರು ಈ ಬಾರಿ ಆ ಪ್ರಶಸ್ತಿಗೆ ಭಾಜನರಾದ ಸುತ್ತೂರು ನಂಜುಂಡನಾಯಕ ರವರಿಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಜೆಎಸ್‌ಎಸ್ ಸಂಸ್ಥೆಯ ಗೌರವ ಸಹಾಯಕ ಆಡಳಿತಾಧಿಕಾರಿಯಾದ ಎಸ್.ಪಿ.ಉದಯಶಂಕರ್ ರವರು ಪ್ರಶಸ್ತಿ ಪ್ರಧಾನ ಮಾಡಿ ನಂತರ ಮಾತನಾಡುತ್ತಾ, ಮಾಧ್ಯಮ ಕ್ಷೇತ್ರದಲ್ಲಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಗುರುತಿಸಿ ಕಳೆದ ೧೩ ವರ್ಷಗಳಿಂದ ಸುತ್ತೂರು ಮಠದ ವತಿಯಿಂದ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡುತ್ತಾ ಬರಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯ ೨೦೨೩ನೇ ಸಾಲಿಗೆ ಕನ್ನಡಪ್ರಭ ವರದಿಗಾರ ಸುತ್ತೂರು ನಂಜುಂಡನಾಯಕ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಮರಣಿಕೆ ಹಾಗೂ ೧೦ ಸಾವಿರ ರೂ. ಚೆಕ್ ನೀಡಿ ಗೌರವಿಸಲಾಯಿತು.
ಜೆಎಸ್‌ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ರವರು ಪ್ರಶ್ತಿಗೆ ಭಾಜನರಾದ ಸುತ್ತೂರು ನಂಜುಂಡನಾಯಕ ರವರ ಕಾರ್ಯಸಾಧನೆಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಸಭೆಗೆ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಹೆಡತಲೆ ದೊರೆಸ್ವಾಮಿನಾಯಕ, ಶಿವಪ್ಪ ದೇವರು, ವೀರಶೈವ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ, ಪ್ರಧಾನ ಕಾರ್ಯದರ್ಶಿ ವಿನಯ್, ರೈತ ಮುಖಂಡರಾದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಸತೀಶ್, ಉದ್ಯಮಿ ಜಗದೀಶ್, ವಕೀಲರುಗಳಾದ ಮುರುಳಿ, ಮಹೇಶ್, ಆರ್.ವಿ.ರೇವಣ್ಣ, ಆರ್.ವಿ.ದಯಾನಂದ್, ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ನಗರ್ಲೆ ವಿಜಯ್‌ಕುಮಾರ್, ನಗರಸಭಾ ಸದಸ್ಯರಾದ ಗಂಗಾಧರ, ಬಸವರಾಜು, ರವಿ, ಶ್ವೇತಲಕ್ಷ್ಮಿ ಸತೀಶ್‌ಗೌಡ, ಮುದ್ದಹಳ್ಳಿ ಅಡುಗೆ ಚಂದ್ರು ಸೇರಿದಂತೆ ಭಾಗವಹಿಸಿದ್ದರು.
ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಗಂಗಾಧರ್, ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಸತ್ಯನಾರಾಯಣ, ಕಾರ್ಯದರ್ಶಿ ಮಹದೇವಸ್ವಾಮಿ.ಎಂ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹುಲ್ಲಹಳ್ಳಿ ಮೋಹನ್, ಚಿನ್ನಸ್ವಾಮಿ, ಟಿ.ಕೆ.ಬಸವರಾಜು, ಎನ್.ಭಾಗ್ಯರಾಜು, ಜಿ.ಎಂ.ವೇಣುಗೋಪಾಲ್, ಎನ್.ಪಿ.ದೀಪಕ್, ಮಲ್ಕುಂಡಿ ಚೆನ್ನಪ್ಪ, ಸದಸ್ಯರುಗಳಾದ ಪಿ.ಮಹದೇವಪ್ರಸಾದ್, ಎಂ.ಪ್ರಕಾಶ್, ಹುಲ್ಲಹಳ್ಳಿ ಶ್ರೀನಿವಾಸ್, ನಂಜನಗೂಡು ಮಧು, ಮಾಜಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಪೇಗೌಡ, ಕೋಡಿನರಸೀಪುರ ಪ್ರತಾಪ್, ಬಸವರಾಜು.ಸಿ.ಎಂ, ಚಂದ್ರಶೇಖರ್, ಹುರಾ ಕೃಷ್ಣಪ್ಪಗೌಡ ಹಾಗೂ ಸಂಘದ ಎಲ್ಲಾ ಸದಸ್ಯರುಗಳು, ನಗರದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.