ಮಂಡ್ಯ:ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ಪರಿಹಾರದ ಗ್ಯಾರಂಟಿ ಸಾಕು ಮಾಡಿ,ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ,ಆರ್ಥಿಕ ಶೈಕ್ಷಣಿಕ,ಸಾಂಸ್ಕೃತಿಕ,ರಾಜಕೀಯ ಸಮಾನತೆ ಕಲ್ಪಿಸಿ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಜನಾಗ್ರಹ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ರೈತ ಸಭಾಂಗಣ ಆವರಣದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಅವಕಾಶ ವಂಚಿತರಿಗೆ ತಾತ್ಕಾಲಿಕ ಪರಿಹಾರವಾಗಿದ್ದು,ಭೂಮಿ ನೀಡುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಎಚ್.ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಜನಗಣತಿ ವರದಿಯನ್ನು ಸಂಪುಟ ಮತ್ತು ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕು,ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸುವ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನಾ ಕಾಯ್ದೆಯಲ್ಲಿ ಮೀಸಲು ಅನು
ದಾನವನ್ನು ಹಿಂಪಡೆದುಕೊಳ್ಳುವ ಸರ್ಕಾರದ ಅವಕಾಶವನ್ನು ಕೈ ಬಿಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕು.ಈಗಾಗಲೇ ಕಡಿತವಾಗಿರುವ ಪರಿಶಿಷ್ಟರ ಅನುದಾನ ಕ್ರೋಡೀಕರಿಸಿ ಪರಿಶಿಷ್ಟ ಸಮುದಾಯದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ವಿಶೇಷ ಅನುದಾನ ಘೋಷಿಸಬೇಕು ಹಾಗೂ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಿ ಸ್ವಯಂ ಉದ್ಯೋಗ ದೊರಕಿಸಿ
ಕೊಡಬೇಕು ಎಂದು ಒತಾಯಿಸಿದರು.
ಭೂಮಿ ಪರ ಬಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಾಡಿ ಭೂ ರಹಿತ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ನೀಡಿ ಭೂಮಿ ಹಂಚಿಕೆ ಮಾಡಿ ಹಕ್ಕು ಖಾತ್ರಿಪಡಿಸುವ ಕರ್ನಾಟಕ ಸಮಗ್ರ ಭೂ ಕಾಯ್ದೆಯನ್ನು ಜಾರಿಗೊಳಿಸಬೇಕು,ಅನಾಗರಿಕ ಅಸ್ಪಶ್ಯತೆ ಆಚರಣೆ ಕೊನೆಗಾಣಿಸಲು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಪ್ರತಿನಿಧಿ ಒಳಗೊಂಡ ಜಾಗತಿಕ ಸಮೇವೇಶ ನಡೆಸಬೇಕು, ಅಸ್ಪೃಶ್ಯತೆ ನಿರ್ಮೂಲನೆಗೆ ಕ್ರಿಯಾ ಯೋಜನೆ ರೂಪಿಸಿ ಜಾರಿಗೊಳಿಸಲು ಬಜೆಟ್ ನಲ್ಲಿ ಅನುದಾನ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಮೀಸಲು ಪ್ರಮಾಣಕ್ಕೆ ಮಿತಿ ಏರಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಆಳುವ ಸರ್ಕಾರಗಳು ಮೇಲ್ಮನವಿ ಸಲ್ಲಿಸದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹವಾಗಿದೆ, ಪರಿಶಿಷ್ಟರಿಗೆ ಜನಸಂಖ್ಯೆವಾರು ಮೀಸಲು ಹೆಚ್ಚಿಸುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ಮೀಸಲು ವರ್ಗೀಕರಣ ಗೊಳಿಸಲು ನ್ಯಾ.ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು,ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಬ್ರಾಹ್ಮಣ್ಯವಾದಿ, ಮನುಸ್ಮೃತಿ ಆಧಾರಿತ ರಾಷ್ಟ್ರೀಯ ಶಿಕ್ಷಣ ನೀತಿ ಕೈ ಬಿಟ್ಟು.ಶಿಕ್ಷಣ ತಜ್ಞರ ಆಯೋಗ ರಚಿಸಿ ಏಕರೂಪದ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಿ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ನೇರ ನೇಮಕಾತಿ ಮಾಡಿಕೊಳ್ಳಬೇಕು,ಸಾರಿಗೆ ನಿಗಮದ ಚಾಲಕರು,ನಿರ್ವಾಹಕರು,ಕಂದಾಯ ಇಲಾಖೆ ಗ್ರಾಮ ಸಹಾಯಕರು, ನೀರಾವರಿ ಇಲಾಖೆ ನೀರು ಗಂಟೆಗಳನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು, ಉಚಿತ ಆರೋಗ್ಯ ವ್ಯವಸ್ಥೆ ಜಾರಿಗೆ ತರಬೇಕು, ಸರ್ಕಾರಿ ಕಚೇರಿಗಳಲ್ಲಿ ಎಲ್ಲಾ ಧರ್ಮಗಳ ಸ್ಥಾಪಕರ ಭಾವಚಿತ್ರ ಕಡ್ಡಾಯಗೊಳಿಸಬೇಕು,ಮಂಡ್ಯ ನಗರದಲ್ಲಿನ ಡಾ.ಬಿ.ಆರ್.
ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ 5 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು
ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,ಅನಿಲ್ ಕುಮಾರ್ ಕೆರಗೋಡು,ಕೆ.ಎಂ ಶ್ರೀನಿವಾಸ್,ಈಚಗೆರೆ ನಾಗರಾಜು, ಎಸ್.ಕುಮಾರ್,ಬಾಲರಾಜ್, ಮಾರಪ್ಪ ದ್ಯಾವಪಟ್ಟಣ,ಹರಿ ಕುಮಾರ್,ಗೀತಾ ಮೇಲುಕೋಟೆ, ಬಿ.ಎಂ.ಸೋಮಶೇಖರ,ಬಿ.ಆನಂದ,
ಬಲರಾಮಣ್ಣ,ಸುರೇಶ್,ಭಾಗ್ಯಮ್ಮ
ಗೀತಾ,ಸುಕನ್ಯ ಇತರರು ಹಾಜರಿದ್ದರು.