ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ ಅನಾರೋಗ್ಯದಿಂದ ನಿನ್ನೆ ತಡ ರಾತ್ರಿ ನಿಧನರಾದರು.
ಅವರಿಗೆ ೬೮ ವರ್ಷ ವಯಸ್ಸಾಗಿತ್ತು. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಶೈಲಾ ರಾಣಿ ಅವರು ೨೦೨೨ರಲ್ಲಿ ಕೇದಾರನಾಥ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು.
೨೦೧೨ರಲ್ಲಿ ಶೈಲಾ ರಾಣಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿದ್ದರು. ನಂತರದ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು.