ಯಳಂದೂರು: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಶಿಲ್ಪನಾಗ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಲಭಿಸಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ, ಈ ಸಭೆಗೆ ಉತ್ತಮ ಸ್ಪಂದನೆ ಲಭಿಸಿದೆ. ಇಲ್ಲಿನ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ೨೦ ದಿನದೊಳಗೆ ವಿಲೇವಾರಿ ಮಾಡಬೇಕು. ಆದರೆ ಇದನ್ನು ಕಾಟಾಚಾರಕ್ಕೆ ಮಾಡಬಾರದು ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು. ಇದರಲ್ಲಿ ಅನೇಕ ಸಮಸ್ಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಬಗೆಹರಿಯುತ್ತದೆ. ಇದನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳು ಹೊರಬೇಕು.
ಯಳಂದೂರು ತಾಲೂಕು ಚಿಕ್ಕ ತಾಲೂಕಾಗಿದೆ. ಆದರೂ ಸಹ ಜಿಲ್ಲಾಡಳಿತದ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಹೆಚ್ಚು ಸ್ಪಂದನೆ ಸಿಕ್ಕಿದೆ. ಇದರಲ್ಲಿ ಕಂದಾಯ ಇಲಾಖೆಗೆ ೪೨ ತಾಲೂಕು ಪಂಚಾಯಿತಿ ೩೭, ಪಟ್ಟಣ ಪಂಚಾಯಿತಿ ೩೮, ಎಡಿಎಲ್‌ಆರ್ ೦೪, ಕೆಎಸ್ಸಾರ್ಟಿಸಿ ೪, ಸಮಾಜ ಕಲ್ಯಾಣ ಇಲಾಖೆಯ ೩, ಕೃಷಿ ಇಲಾಖೆಯ ೨, ತೋಟಗಾರಿಕಾ ಇಲಾಖೆಯ ೨, ಅಂಗವಿಕಲರ ೧ ಅರ್ಜಿಗಳು ಸೇರಿದಂತೆ ಒಟ್ಟು ೧೫೩ ಅರ್ಜಿಗಳು ಬಂದಿವೆ. ಇದರಲ್ಲಿ ಸ್ಥಳದಲ್ಲೇ ೨೦ ರಿಂದ ೨೫ ಅರ್ಜಿಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಕೆಸ್ಸಾರ್ಟಿಸಿ ಬಸ್ ಸಂಪರ್ಕ ಕಲ್ಪಿಸುವುದು, ಮೈಸೂರಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡುವುದು, ಪಟ್ಟಣದಿಂದ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸುವುದು ಪ್ರಮುಖ ಬೇಡಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಭೆಗಳನ್ನು ಹೋಬಳಿ ಮಟ್ಟದಲ್ಲೂ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಪಟ್ಟಣದ ಮಹದೇಶ್ವರ ಚಿತ್ರಮಂದಿರದ ಬಳಿ ಇರುವ ಬಾರ್‌ಗೆ ಪರವಾನಿಗೆಯೇ ಇಲ್ಲ ಹಾಗಾಗಿ ಇದನ್ನು ತೆರವುಗೊಳಿಸಬೇಕು. ಅಲ್ಲದೆ ಪಟ್ಟಣದ ಅಶ್ವಿನಿ ಆಸ್ಪತ್ರೆಯ ಬಳಿ ಹೊಸದಾಗಿ ಬಾರ್ ತೆರೆಯಲು ಅನುಮತಿ ನೀಡಬಾರದು. ಬೆಳೆ ವಿಮೆಯ ಹಣ ಇನ್ನೂ ಬಾಕಿ ಇದ್ದು ಇದನ್ನು ಕೊಡಿಸಬೇಕು, ಕಂದಹಳ್ಳಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಚರಂಡಿ ನಿರ್ಮಿಸುವುದು ಸೇರಿದಂತೆ ವಿವಿಧ ಅರ್ಜಿಗಳು ಸಲ್ಲಿಕೆಯಾದವು.
ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ, ಅಬಕಾರಿ ಡೀಸಿ ನಾಗಶಯನ, ಉಪವಿಭಾಗಾಧಿಕಾರಿ ಮಹೇಶ್ ತಹಶೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಲಕ್ಷ್ಮಿ, ಸುಶೀಲಾ, ಮಹದೇವನಾಯಕ ಸೇರಿದಂತೆ ಹಲವರು ಹಾಜರಿದ್ದರು.