ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯದಲ್ಲಿ ೨.೬೦ ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ‍್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿರುವುದರಿಂದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್ ಅವರು ಶಾಸಕ ಡಿ.ರವಿಶಂಕರ್ ಅವರಿಗೆ ಸರ್ಕಾರದ ಗಮನ ಸೆಳೆಯಲು ಸಂಘದ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಿದರು.
ಸರ್ಕಾರವು ರಾಜ್ಯ ೭ನೇ ವೇತನ ಆಯೋಗಕ್ಕೆ ನಿಗದಿಪಡಿಸಿದ್ದ ಆರು ತಿಂಗಳ ಅವಧಿಯೊಳಗೆ ವರದಿಯನ್ನು ರಾಜ್ಯ ೭ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದಾಗ್ಯೂ, ನೀತಿ ಸಂಹಿತೆ ಮುಗಿದ ನಂತರ ನೀಡುವ ಭರವಸೆಯನ್ನು ನೀಡಿದ್ದರು. ಈ ವರೆವಿಗೂ ಈಡೇರಿಲ್ಲ ಆದ್ದರಿಂದ ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಕ್ಷೇತ್ರದ ಶಾಸಕರು ಈ ಬಗ್ಗೆ ಚರ್ಚಿಸಿ ಎಂದು ಮನವಿ ಮಾಡಲಾಗಿದೆ ಎಂದು ಸಿ.ಜೆ ಅರುಣ್ ತಿಳಿಸಿದರು
ಮನವಿ ಸ್ವೀಕರಿಸಿದ ಶಾಸಕ ಡಿ.ರವಿಶಂಕರ್ ತಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶಂಕರೇಗೌಡ, ತಾಲೂಕು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಜೆ.ಡಿ.ಶಶಿಕಿರಣ್, ತಾಪ್ರಾ. ಶಾಲಾ ಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಚಿಕ್ಕಕೊಪ್ಪಲು ಸಿ.ಎನ್. ಸ್ವಾಮಿ, ಖಜಾಂಚಿ ಡಿ.ವಿ.ಗುಡಿ ಪ್ರಸನ್ನ ಇದ್ದರು.