ಗುಂಡ್ಲುಪೇಟೆ: ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಕಸ ಸಂಗ್ರಹಣ ಆಟೋಗೆ ನೀಡುವ ಮೂಲಕ ಗ್ರಾಮದ ಸ್ವಚ್ಛತೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಮನವಿ ಮಾಡಿದರು.
ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಆವರಣದಲ್ಲಿ ಒಣ ಕಸ ಸಂಗ್ರಹಣೆ ಆಟೋಗೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಗೆ ಭೀಮನಬೀಡು ಹಾಗೂ ಹುಲಸಗುಂದಿ ಎರಡು ಗ್ರಾಮಗಳು ಒಳಪಡಲಿದ್ದು, ಈಗಾಗಲೇ 1450 ಮನೆಗಳಿಗೆ ಒಣ ಕಸ ಮತ್ತು ಹಸಿ ಕಸ ಸಂಗ್ರಹಣೆ ಎರಡು ಡಬ್ಬಿಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಪಂಚಾಯಿತಿ ವತಿಯಿಂದ ಘನ ತ್ಯಾಜ್ಯ ಘಟಕವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದು, ಒಣ ಕಸ ಸಂಗ್ರಹಣೆ ಆರಂಭಿಸಲಾಗಿದೆ. ಭೀಮನಬೀಡು ಹಾಗೂ ಹುಲಸಗುಂದಿ ಗ್ರಾಮಗಳ ಪ್ರತಿ ಮನೆಗಳ ಮುಂದೆ ಆಟೋ ಬರಲಿದ್ದು, ಗ್ರಾಮಸ್ಥರು ಒಣ ಕಸವನ್ನು ಆಟೋಗೆ ನೀಡಬೇಕು. ಈ ಮೂಲಕ ಸ್ವಚ್ಛತೆಗೆ ಸ್ವಯಂ ಪ್ರೇರಿತವಾಗಿ ಎಲ್ಲರೂ ಕೈಜೋಡಿಸಬೇಕು. ಇದರಿಂದ ಗ್ರಾಮ ಹಾಗು ಪರಿಸರ ಉತ್ತಮವಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮನಬೀಡು ಗ್ರಾಪಂ ಉಪಾಧ್ಯಕ್ಷರಾದ ಸೌಮ್ಯ ಮಹೇಶ್, ಸದಸ್ಯರಾದ ಕಾವ್ಯ ಮಣಿಕಂಠ, ಸುಶೀಲಮ್ಮ, ಮಹದೇವೇಗೌಡ, ರಾಜು, ಮಮತ, ರಾಧಾ, ನವೀನ, ಕೃಷ್ಣಶೆಟ್ಟಿ, ಚಿಕ್ಕುಶೆಟ್ಟಿ, ಪಿಡಿಓ ಭೋಜೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.