ರಾಮನಗರ: ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂದಾಕ್ಷಣ ನೆನಪಾಗುವುದು ಬೃಹತ್ತಾದ ವಚನ ಸಾಹಿತ್ಯ ಸಿರಿ. ತಾಡೋಲೆಗಳಲ್ಲಿ ಆಡಗಿಹೋಗಿದ್ದ ಮೂರುನೂರು ವಚನಕಾರರ ವಚನಗಳನ್ನು ಸಾಹಿತ್ಯ ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಹಳಕಟ್ಟಿ ಅವರು ವಚನ ಸಾಹಿತ್ಯದ ಪಿತಾಮಹ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಾ. ಫ.ಗು. ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಮನೆ ಮನೆಗಳಲ್ಲಿ ಸೇರಿಹೋಗಿದ್ದ ತಾಡೋಲೆ ಪ್ರತಿಗಳನ್ನು ಹುಡುಕಿ ವಚನ ಸಾಹಿತ್ಯದ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟರು ಎಂದು ಹೇಳಿದರು.
ದಶಕಾಲಗಳನ್ನೂ ಮೀರಿ ತನ್ನ ಸತ್ವ ತತ್ವಗಳ ಮೂಲಕ ಸಾಹಿತ್ಯ ಜಗತ್ತಿನಲ್ಲಿ ವಚನ ಸಾಹಿತ್ಯ ಸಂಚಲನ ಮೂಡಿಸುವಲ್ಲಿ ಹಳಕಟ್ಟೆ ಅವರದು ಸಿಂಹಪಾಲು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಶಿವಮಾಧು, ಪ್ರಕಾಶ್, ಲೋಕೇಶ್ ಹಾಗೂ ಇತರರು ಉಪಸ್ಥಿತರಿದ್ದರು.