ರಾಮನಗರ: ಸೊಳ್ಳೆಗಳಿಂದ ಪ್ರಮುಖವಾಗಿ ಮಲೇರಿಯ, ಡೆಂಗಿ, ಚಿಕುನ್ ಗುನ್ಯ, ಮೆದುಳುಜ್ವರ ರೋಗಗಳು ಹರಡುತ್ತವೆ. ಸೋಂಕಿತ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಲೇರಿಯ ಸೋಂಕು ತಗುಲಿದಾಗ ಚಳಿ, ಜ್ವರ, ತಲೆನೋವು, ನಡುಕ, ವಾಂತಿ, ವಾಕರಿಕೆ, ಮೈ-ಕೈನೋವು, ಡೆಂಗಿಯಲ್ಲಿ ಮೈಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಬಾಗ ನೋವು, ಸೋಂಕು ತೀರ್ವತರವಾದಾಗ ವಸಡು, ಮೂಗು, ಕಿವಿಗಳಲ್ಲಿ ರಕ್ತಸ್ರಾವ ಡಾಂಬರು ಬಣ್ಣದ ಮಲವಿಸರ್ಜನೆ, ಚಿಕುನ್‌ಗುನ್ಯದಲ್ಲಿ ಜ್ವರ, ಸಣ್ಣ-ಸಣ್ಣ ಕೀಲುಗಳ ನೋವು, ಮೆದುಳು ಜ್ವರದಲ್ಲಿ ತೀವ್ರತರ ಜ್ವರ, ಜ್ಞಾನ ತಪ್ಪುವುದು, ಆನೇಕಾಲು ರೋಗದಲ್ಲಿ ಕಾಲುಗಳು ಮತ್ತು ವೃಷಣಭಾಗದ ಊತ ಇಂತಹ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಬೇಕು ಒಂದುವೇಳೆ ಪ್ರಕರಣಗಳು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದು ಗುಣಮುಖರಾಗುವ ಜೊತೆಗೆ ಸೊಳ್ಳೆಕಡಿತದಿಂದ ರಕ್ಷಣೆ ಪಡೆದುಕೊಳ್ಳ ಬೇಕು ಹಾಗೂ ತಾವೆಲ್ಲರೂ ಆರೋಗ್ಯದ ಕಾಳಜಿ ವಹಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲಾ ಕಾರಾಗೃದಲ್ಲಿ ಬಂದಿನಿವಾಸಿಗಳಿಗೆ ಸೊಳ್ಳೆಗಳಿಂದ ಹರಡುವ ರೋಗಗಳು ಮತ್ತು ಕ್ಷಯ ರೋಗ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಅವರು ಕ್ಷಯರೋಗ ನಿಯಂತ್ರಣ ಕುರಿತಂತೆ ಮಾತನಾಡಿ, 2 ವಾರಕ್ಕೂ ಹೆಚ್ಚು ಕೆಮ್ಮು, ಸಂಜೆವೇಳೆ ಜ್ವರ, ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ತೂಕದಲ್ಲಿ ಇಳಿಕೆ ಇಂತಹ ಲಕ್ಷಣಗಳು ಕಂಡ ಬಂದು ತಕ್ಷಣ ಅಧಿಕಾರಿಗಳು, ವೈದ್ಯರಿಗೆ ತಿಳಿಸಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಒಂದು ವೇಳೆ ಕ್ಷಯವೆಂದು ದೃಢಪಟ್ಟಲ್ಲಿ ಉಚಿವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ನಿಕ್ಷಯ್ ಮಿತ್ರ ಯೋಜನೆಯಡಿಯಲ್ಲಿ ಪೋಷ್ಠಿಕ ಆಹಾರ ಸೇವನೆಗೆ ಆರ್ಥಿಕ ಸಹಾಯವನ್ನು ಮಾಡಲಾಗುವುದು. ತಾವುಗಳು ತಂಬಾಕು ಉತ್ಪನ್ನಗಳ ಸೇವನೆಯಿಂದ ಮುಕ್ತರನ್ನಾಗಿ ಉತ್ತಮ ಆರೋಗ್ಯ ಪಡೆಯಬೇಕು ಹಾಗೂ ವೈಯಕ್ತಿಕ ಸ್ವಚ್ಛತೆಕಡೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಬೇಕಾದರೆ ಸೊಳ್ಳೆಗಳ ನಿಯಂತ್ರಣ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರು ಶೇಕರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆ ಇವುಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು ಹಾಗೂ ಈಗಾಗಲೆ ಅಕಾಲಿಕ ಮಳೆ ಪ್ರಾರಂಭವಾಗಿದ್ದು ಘನತ್ಯಾಜ್ಯಗಳಾದ ಟೈರು, ಎಳನೀರ ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು ಇವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ಕ್ರಮವಹಿಸಿ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾರಾಗೃಹದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು ಹಾಗೂ ಬಂದಿ ನಿವಾಸಿಗಳು ಮೈತುಂಬ ಬಟ್ಟೆ ಧರಿಸಬೇಕು ಮತ್ತು ಸೊಳ್ಳೆ ಪರದೆ ಬಳಸುವುದರಿಂದ ಸಂಪೂರ್ಣ ರಕ್ಷಣ ಪಡೆಯಬಹುದೆಂದು ತಿಳಿಸಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ರಾಕೇಶ್‌ಕಾಂಬಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂದಿ ನಿವಾಸಿಗಳ ಆರೋಗ್ಯ ಹಿತದೃಷ್ಠಿಯಿಂದ ಅರಿವು ಮೂಡಿಸಲಾಗುತ್ತಿದ್ದು ವೈದ್ಯಾಧಿಕಾರಿಗಳು ತಿಳಿಸಿದ ಮಾಹಿತಿಯನ್ನು ತಾವೆಲ್ಲರೂ ಅರ್ಥ ಮಾಡಿಕೊಂಡು ಯಾವುದಾದರು ಲಕ್ಷಣಗಳಿದಲ್ಲಿ ಮುಕ್ತವಾಗಿ ನಮ್ಮೊಂದಿಗೆ ಅಥವಾ ಕಾರಾಗೃಹದ ವೈದ್ಯರಿಗೆ ತಿಳಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ತಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಂಡು ಉತ್ತಮ ಜೀವನ ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈಲರ್‌ಗಳಾದ ಇಮಾಮ್‌ಖಾಸಿಂ, ಈರಪ್ಪಸದಲಾಪುರ್, ಡಾ. ಯೋಗೇಶ್, ಕೀಟಶಾಸ್ತçಜ್ಞೆ ಸೌಮ್ಯ, ಆರೋಗ ಮೇಲ್ವಿಚಾರಣಾಧಿಕರಿ ರೇಣುಕಯ್ಯ, ಜಿಲ್ಲಾ ಲ್ಯಾಬ್ ನೋಡಲ್ ಅಧಿಕಾರಿ ಶಿವಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿನಯ್ ಕುಮಾರ್, ರಾಜೇಂದ್ರ, ಕಚೇರಿ ಸಿಬ್ಬಂದಿ ಹಾಗೂ ಬಂದಿ ನಿವಾಸಿಗಳು ಹಾಜರಿದ್ದರು.