ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯ ಮೊಂಗ್ಬಂಗ್ ಗ್ರಾಮದಲ್ಲಿ ಇಂದು ಭಾನುವಾರ ಬೆಳಿಗ್ಗೆ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನ್ ಹುತಾತ್ಮನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ಪೊಲೀಸ್ ಪೇದೆಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೃತನನ್ನು ಬಿಹಾರ ಮೂಲದ ಅಜಯ್ ಕುಮಾರ್ ಝಾ (೪೩) ಎಂದು ಗುರುತಿಸಲಾಗಿದೆ. ಅವರ ತಲೆಗೆ ಗುಂಡು ತಗುಲಿದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಗಾಯಗೊಂಡ ಪೊಲೀಸ್ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ರಾತ್ರಿಯೂ ಗ್ರಾಮದಲ್ಲಿ ಗುಂಡಿನ ಸದ್ದು ಕೇಳಿದೆ ಎಂದು ಅವರು ಹೇಳಿದರು. ಭಾನುವಾರದ ದಾಳಿಯ ನಂತರ ಪಕ್ಕದ ಗುಡ್ಡಗಾಡು ಪ್ರದೇಶಗಳಿಂದ ಮೊಂಗ್ಬಂಗ್ನಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.