ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದ ಮತ್ತೆ ಉತ್ತಮ ಮಳೆ ಸುರಿಯುತ್ತಿದೆ. ಇಂದು ಹವಾಮಾನ ಇಲಾಖೆಯು ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಇಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೆಳಗ್ಗೆ ರಜೆಯನ್ನು ಘೋಷಿಸಿದರು.
ಬಂಟ್ವಾಳದ ತುಂಬೆ ಯಲ್ಲಿ ನೇತ್ರಾವತಿ ನೀರಿನಮಟ್ಟದಲ್ಲಿ ಏರಿಕೆ ಕಾಣಿಸಿಕೊಂಡಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 34.5 ಮಿ.ಮೀ ಆಗಿದೆ. ರವಿವಾರ ಬೆಳಗ್ಗಿನವರೆಗೆ ಬೆಳ್ತಂಗಡಿ 43.3 ಮಿಮೀ, ಬಂಟ್ವಾಳ 43.3 ಮಿ.ಮೀ, ಮಂಗಳೂರು 40.8 ಮಿ.ಮೀ, ಪುತ್ತೂರು 47 ಮಿ.ಮೀ, ಸುಳ್ಯ 39 ಮಿ.ಮೀ, ಮೂಡುಬಿದಿರೆ 46.9 ಮಿ.ಮೀ. ಕಡಬ 44 ಮಿ.ಮೀ, ಮೂಲ್ಕಿ 40.8 ಮಿ.ಮೀ, ಉಳ್ಳಾಲ 40.5 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 34.5 ಮಿ.ಮೀ. ಆಗಿದೆ.
ಕರಾವಳಿಯಲ್ಲಿ ಗಂಟೆಗೆ 35ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.