Sunday, April 20, 2025
Google search engine

Homeರಾಜ್ಯಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳ ಬಗೆಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ: ಸಚಿವ ಕೃಷ್ಣ ಬೈರೇಗೌಡ

ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳ ಬಗೆಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಸರ್ವೇ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಅವಧಿಯ ವೇಳೆ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರು ಸರ್ವೇ ಇಲಾಖೆ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ವೇ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮದಲ್ಲೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ರಾಜ್ಯದಲ್ಲಿ ೧,೦೦೦ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ೭೫೦ ಸರ್ಕಾರಿ ಸರ್ವೇಯರ್ ಭರ್ತಿ ಪ್ರಕ್ರಿಯೆ ನಡೆದಿದೆ. ಇದರ ಜೊತೆಗೆ ೧೦೦ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಹಾಗೂ ೩೫ ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮುಂದಿನ ೩ ರಿಂದ ೬ ತಿಂಗಳ ಒಳಗಾಗಿ ಈ ಎಲ್ಲಾ ಹುದ್ದೆಗಳನ್ನೂ ನ್ಯಾಯಸಮ್ಮತವಾಗಿ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಂದುವರೆದು, ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಾಭಾವಿಕವಾಗಿ ಸರ್ವೇ ಇಲಾಖೆಗೆ ಬಲ ಬರಲಿದೆ. ಈ ಹುದ್ದೆಗಳಲ್ಲದೆ, ಹೆಚ್ಚುವರಿಯಾಗಿ ಹೊಸ ಹುದ್ದೆಗಳ ಸೃಷ್ಟಿಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದು ಮತ್ತಷ್ಟು ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರ ಸಿದ್ದವಾಗಿದೆ. ಇದರ ಜೊತೆಗೆ ನಮ್ಮ ಸಿಬ್ಬಂದಿಗಳ ಕೆಲಸದ ವೇಗ ಹೆಚ್ಚಾಗಲು ಮೂರು ಪಟ್ಟು ಸರ್ವೇ ಕೆಲಸದ ವೇಗ ಪಡೆಯಲು ಆಧುನಿಕ ಉಪಕರಣವಾದ ರೋವರ್ ಬಳಸಿ ಸರ್ವೇ ನಡೆಸಲೂ ಸೂಚಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ವೇ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು

RELATED ARTICLES
- Advertisment -
Google search engine

Most Popular