ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ಸರ್ಕಾರವು ತನ್ನ ಕೃಷಿ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಬಹು ನಿರೀಕ್ಷಿತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಮಾರ್ಗಸೂಚಿಗಳ ಪ್ರಕಾರ, ರೈತರು ೨೦೧೮ರ ಡಿಸೆಂಬರ್ ೧೨ ಮತ್ತು ೨೦೨೩ರ ಡಿಸೆಂಬರ್ ೯ರ ಅವಧಿಯ ನಡುವೆ ಪಡೆದಿರುವ ೨ ಲಕ್ಷದವರೆಗಿನ ಕೃಷಿ ಸಾಲದ ಮನ್ನಾಕ್ಕೆ ಅರ್ಹರಾಗಿರುತ್ತಾರೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಆರು ಗ್ಯಾರಂಟಿಗಳನ್ನು ನೀಡುವ ಭರವಸೆಯ ಜತೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಲೋಕಸಭೆ ಚುನಾವಣೆ ವೇಳೆ ಕೃಷಿ ಸಾಲ ಮನ್ನಾ ಯೋಜನೆ ಜಾರಿ ವಿಳಂಬವಾಗುತ್ತಿದ್ದಂತೆ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಆಗಸ್ಟ್‌ನೊಳಗೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.
ಸರ್ಕಾರ ಕಲೆಹಾಕಿದ ಮಾಹಿತಿ ಪ್ರಕಾರ ತೆಲಂಗಾಣದಲ್ಲಿ ಸುಮಾರು ೪೭ ಲಕ್ಷ ರೈತರು ಕೃಷಿ ಸಾಲ ಮಾಡಿದ್ದಾರೆ. ಅದರಲ್ಲಿ ಬಹುತೇಕ ಮಂದಿ ೧ ಲಕ್ಷಕ್ಕಿಂತ ಕಡಿಮೆ ಸಾಲ ಹೊಂದಿದ್ದಾರೆ. ಸಾಲ ಮನ್ನಾ ಯೋಜನೆ ಜಾರಿಗೆ ಸರ್ಕಾರಕ್ಕೆ ಕನಿಷ್ಠ ೩೫ ಸಾವಿರ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮಾರ್ಗಸೂಚಿಯ ಪ್ರಕಾರ ಪ್ರತಿ ಕುಟುಂಬದ ಒಂದು ಸಾಲ ಮಾತ್ರ ಮನ್ನಾ ಆಗಲಿದೆ. ೨ ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಿರುವ ಕುಟುಂಬಗಳು ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆಯಲು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.