ಮೈಸೂರು: ಕಾವೇರಿ ವಿಷಯದಲ್ಲಿ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದನ್ನು ಗಮನಿಸಿ “ಕಾವೇರಿ ತಜ್ಞರ ಸತ್ಯ ಶೋಧನ ಸಮಿತಿ ” ರಚಿಸಲು ಮೈಸೂರು ಕಾವೇರಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಇಂದು ಸಂಜೆ ನಗರದ ಜಲದರ್ಶಿನಿಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ ಇತ್ತೀಚಿನ ಕಾವೇರಿ ನದಿ ನಿರ್ವಹಣಾ ಪ್ರಧಿಕಾರ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯದ ತೀರ್ಪು ನೀಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ವಾಸ್ತವವಾಗಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಏಕೆ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿಯಲು ಕಾವೇರಿ ತಜ್ಞರ ಸತ್ಯ ಶೋಧನ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್, ಕಾವೇರಿ ವಿಚಾರದಲ್ಲಿ ಕರ್ನಾಟಕ ಅನ್ಯಾಯಕ್ಕೊಳಗಾಗಲು ಕಾರಣ ಎಂಬುದನ್ನು ನಾವೆಲ್ಲರೂ ತಿಳಿಯಬೇಕಾಗಿದೆ. ಇದಕ್ಕಾಗಿ ಕಾವೇರಿ ತಜ್ಞರ ಸತ್ಯ ಶೋಧನ ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಬಿಳಿಗುಂಡ್ಲು ಜಲಾಶಯದಲ್ಲಿ ಇರುವ ಜಲ ಮಾಪಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಕರ್ನಾಟಕದಿಂದ ತಮಿಳು ನಾಡಿಗೆ 50ಕ್ಕೂ ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಇದಕ್ಕಾಗಿ ಇದರ ಬಗ್ಗೆ ನಿಗಾ ವಹಿಸಲು ಕರ್ನಾಟಕರಾಜ್ಯ ಸರ್ಕಾರದಿಂದ ಒಬ್ಬರನ್ನು ನೇಮಿಸಬೇಕು. ಹಾಗೇ,ಬೆಳಿಗ್ಗೆ 6ಗಂಟೆಯಿಂದ 8 ಗಂಟೆವರೆಗೆ ಹರಿಯುವ ಎರಡೂ ಗಂಟೆಗಳ ಲೆಕ್ಕಾಚಾರದಲ್ಲಿ 24 ಗಂಟೆಗಳಲ್ಲಿ ನೀರು ಹರಿದು ಹೋಗಿರುವ ಲೆಕ್ಕಚಾರ ಮಾಡಲಾಗುತ್ತಿದೆ. ಬೇರೆ ಸಮಯದಲ್ಲಿ ಹೆಚ್ಚುವರಿ ನೀರು ಹೋದರೆ, ಅದರ ಲೆಕ್ಕಾಚಾರ ಹಾಕುತ್ತಿಲ್ಲ. ಆದ್ದರಿಂದ ಜಲ ಮಾಪನ ಕಾರ್ಯ ಕರ್ನಾಟಕ ಉಸ್ತುವಾರಿಯಲ್ಲಿ ನಡೆಯುವಂತೆ ಮಾಡಬೇಕು ಎಂದು ಸಭೆಯಲ್ಲಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯನ್ನೂ ಅವರು ಅಗ್ರಹಿಸಿದರು.
ಕಾವೇರಿ ತೀರ್ಪಿನ ಪ್ರಕಾರ ಕರ್ನಾಟಕ 18ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪಡಿಸಿಕೊಳ್ಳಬಹುದಾಗಿದೆ. ಈಗ ರಾಜ್ಯದ ಅಚ್ಚುಕಟ್ಟು ಪ್ರದೇಶ 13ಲಕ್ಷವಿದೆ. 5ಲಕ್ಷ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪಡಿಸಿಕೊಂಡರೆ ತಮಿಳು ನಾಡಿಗೆ ಹರಿದು ಹೋಗುತ್ತಿರುವ ನೀರನ್ನು ನಾವೂ ಬಳಸಿಕೊಳ್ಳಬಹುದು, ಹಾಗೇ, ನಮ್ಮ ಜಲಾಶಯದಲ್ಲಿ ಇರುವ ನೀರು ಬಿಡಿ ಎಂದು ತಮಿಳು ನಾಡು ಕೋರ್ಟ್ ಮೊರೆ ಹೋಗುವುದು ತಪ್ಪುತ್ತದೆ ಎಂಬ ಸಭೆಯ ತೀರ್ಮಾನವನ್ನು ಸರ್ಕಾರದ ಗಮನಕ್ಕೆ ತರೋಣ ಎಂದು ತಿಳಿಸಿದರು.
ಬಹು ಮುಖ್ಯವಾಗಿ ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿ ಉಂಟು ಮಾಡುವ ಮತ್ತು 15ಸಾವಿರ ಕೋಟಿ ರೂಪಾಯಿ ದುಂದು ವೆಚ್ಚದ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವ ಮಾತು ಆಡಿಕೊಂಡು ಸರ್ಕಾರ ಕಾಲ ಹರಣ ಮಾಡದೇ, ನಮ್ಮ ಅಚ್ಚುಕಟ್ಟು ನಾಲೆಗಳನ್ನೂ ಅಭಿವೃದ್ಧಿ ಪಡಿಸಿ, ಹೆಚ್ಚುವರಿ ನೀರು ಸಂಗ್ರಹಣೆಗೇ ಯತ್ನಿಸಬೇಕು. ಹಾಗೇ ಬಿಳಿ ಗುಂಡ್ಲು ಬಳಿಯ ಜಲ ಮಾಪನವನ್ನು ಬಂಡೀಪುರ ಗಡಿಯ ಗುಂಡ್ಲು ಜಲಾಶಯದಲ್ಲಿ ನಿರ್ಮಿಸಿದರೆ ಕನಿಷ್ಠ 30 t m c ನೀರನ್ನು ಉಳಿಸಬಹುದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಯ ಪ್ರಕಾಶ್ ಅವರು ಒತ್ತಾಯಿಸಿದರು.
ಇಂದಿನ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪ್ರಕಾಶ್ ಬಾಬು ,ರಾಜ್ಯ ರೈತ ಸಂಘದ ಬೆಳಗೊಳ ಸುಬ್ರಹ್ಮಣ್ಯ, ಮೈಸೂರು ಶರಣ ಮಂಡಳಿ ಉಪಾಧ್ಯಕ್ಷರಾದ ಮಹಾದೇವ ಸ್ವಾಮಿ, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್. ಜಯಪ್ರಕಾಶ್, ಪ್ರಧಾನ ಸಂಚಾಲಕರಾದ ಮೂಗುರು ನಂಜುಂಡಸ್ವಾಮಿ, ಗೌರವ ಕಾರ್ಯದರ್ಶಿಗಳಾದ ಮೆಲ್ಲಹಳ್ಳಿ ಮಹಾದೇವಸ್ವಾಮಿ, ಕಾವೇರಿ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾದ ಎಂ.ಜೆ. ಸುರೇಶ ಗೌಡ ಹಿರಿಯ ಕನ್ನಡ ಹೋರಾಟಗಾರರಾದ ಬೋಗಾದಿ ಸಿದ್ದೇಗೌಡರು, ರಾಜ್ಯ ರೈತ ಸಂಘದ ಸಿಂಧುವಳ್ಳಿ ಶಿವಕುಮಾರ್, ಕನ್ನಡ ಹೋರಾಟಗಾರರಾದ ತೇಜಸ್ ಲೋಕೇಶ್ ಗೌಡ, ಕೃಷ್ಣಪ್ಪ ,ಹನುಮಂತ್ ಗೌಡ ,ಕನ್ನಡ ಚಲನಚಿತ್ರ ನಿರ್ದೇಶಕರ ರಾಮ್ ಜನಾರ್ಧನ್, ಕನ್ನಡ ಸರ್ವೋದಯ ಪಕ್ಷದ ಕಾರ್ಯದರ್ಶಿ ಶಿವ ನಾಯಕರ್ ,ಕಾವೇರಿ ಕ್ರಿಯಾ ಸಮಿತಿಯ ಭಾಗ್ಯಮ್ಮ ,ಆಟೋ ಮಹದೇವ್, ಚಂದ್ರು, ಮಹೇಶ್, ಪಡುವರಹಳ್ಳಿ ಶ್ರೀನಿವಾಸ್, ಹರ್ಷ ದಿನೇಶ್, ಮಂಜು, ವಿಷ್ಣು, ಶ್ರೀನಿವಾಸ್ ,ಕೃಷ್ಣ ಕಬ್ಬು ಬೆಳೆಗಾರರ ಸಂಘದ ಎನ್ .ನಾಗೇಶ್ ಮುಂತಾದರು ಭಾಗವಹಿಸಿದ್ದರು .