ಮಂಡ್ಯ: ಬೆಂಗಳೂರು ಮೂಲದ ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಎಂಬುವವರು 20 ಎಕರೆಗೂ ಅಧಿಕ ಭೂಮಿಯನ್ನು ಭೂಕಬಳಿಕೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಮಂಡ್ಯ ತಾಲೂಕಿನ ಚಂದಗಾಲು ಗ್ರಾಪಂ ವ್ಯಾಪ್ತಿಯ ಬಿಳಗುಲಿ ಗ್ರಾಮದ ಸರ್ವೆ ನಂಬರ್ 94ರಲ್ಲಿನ ಸರ್ಕಾರಿ ಗೋಮಾಳ ಮತ್ತು ಇತರೆ ಸರ್ಕಾರಿ ಜಾಗಗಳನ್ನು ಅಕ್ರಮ ಖಾತೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಮಯೂರವನ ರೆಸಾರ್ಟ್ ಮಾಲೀಕ ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಹೆಸರಿನಲ್ಲಿ ಅಕ್ರಮ ಖಾತೆ ಮಾಡಿಕೊಳ್ಳಲಾಗಿದೆ.
2019ರಲ್ಲಿ ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆಶ್ರಯ ನಿವೇಶನಕ್ಕಾಗಿ ಜಮೀನು ಮೀಸಲಿಡಲಾಗಿದೆ.
ಸರ್ವೇ ನಂಬರ್ 94/1ರಲ್ಲಿ 4 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ 4 ಎಕರೆಯಲ್ಲಿ 115 ಸೈಟುಗಳನ್ನ ಹಂಚಿಕೆ ಮಾಡಿ ಹಕ್ಕು ಪತ್ರ ಸಿದ್ಧಪಡಿಸಿಕೊಳ್ಳಲಾಗಿತ್ತು. ಈ ನಡುವೆ 4 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಅನ್ನು ರೆಸಾರ್ಟ್ ಮಾಲೀಕ ನಿರ್ಮಿಸಿಕೊಂಡಿದ್ದ.

ಬಡವರಿಗೆ ತಲುಪಬೇಕಾದ ಜಾಗದಲ್ಲಿ ವಿಲ್ಲಾಗಳ್ಳನ್ನ ನಿರ್ಮಿಸಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ನೆರವಿನಿಂದ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಿದ್ದಾರೆ.
ಒತ್ತುವರಿಯಾಗಿದ್ದ 20 ಎಕರೆಗೂ ಹೆಚ್ಚಿನ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಲಾಗಿದೆ. ಅಲ್ಲದೇ ಗ್ರಾಪಂಗೆ ಸೇರಿದ ಆಸ್ತಿ ಎಂದು ಶಾಸಕ ದರ್ಶನ್ ಪುಟ್ಟಣಯ್ಯ ನಾಮಫಲಕ ಹಾಕಿಸಿದ್ದಾರೆ.
