ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇಂದು ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು, ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಗರಣದಲ್ಲಿ ಸಿಎಂ-ಡಿಸಿಎಂ ಸಹ ಭಾಗಿಯಾಗಿದ್ದಾರೆ ಎಂದು ತಪ್ಪೊಪ್ಪಿಗೆ ನೀಡಿ, ಇಲ್ಲದಿದ್ದರೆ ನಿಮಗೆ ಇಡಿ ಪವರ್ ಗೊತ್ತಿಲ್ಲ. ಆಮೇಲೆ ನೀವು ಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಇಡಿ ಅಧಿಕಾರಿಗಳು ತನಿಖೆಯನ್ನೇ ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಇಡಿ ಅಧಿಕಾರಿಗಳ ಜೊತೆ ರಾಜಿ ಸಂಧಾನ ಮಾಡಿಕೊಂಡು ಅವರು ಹೇಳಿದ್ದನ್ನು ಕೇಳಿಕೊಂಡು ಇರುವವರಿಗೆ ಅಭಯ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾಯಿತಗೊಂಡಿರುವ ಸರ್ಕಾರವನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ? ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು, ಜನ ಮನ್ನಣೆ ಹಾಗೂ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ದುರ್ಬಲವಾಗಿರು ಬಿಜೆಪಿ ನಾಯಕರು ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದಾರೆ. ಆಪರೇಷನ್ ಕಮಲ ಸೇರಿದಂತೆ ಬಿಜೆಪಿಯ ಇಂತಹ ಜನ ವಿರೋಧಿ ಕಸರತ್ತುಗಳು ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ವಿಚಾರವೇನಲ್ಲ. ಇಡಿ, ಸಿಬಿಐ ಹಾಗೂ ಐಟಿಯನ್ನು ಸರ್ಜಿಕಲ್ ಸ್ಟ್ರೈಕ್ ತರ ವಿರೋಧ ಪಕ್ಷಗಳ ವಿರುದ್ದ ಬಿಜೆಪಿ ಬಳಕೆ ಮಾಡುತ್ತಲೇ ಇದೆ. ಇದೀಗ ಮುಂದುವರೆದ ಬಾಗವಾಗಿ ಕರ್ನಾಟಕದಲ್ಲೂ ಹತಾಶ ಮನೋಭಾವದಿಂದ ೨೦೦೯ರಂತೆ ಆಪರೇ಼ನ್ ಕಮಲ ಸಾಧ್ಯವಿಲ್ಲ ಎಂದು ತಿಳಿದು ಇದೀಗ ಇಡಿ ಮೂಲಕ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮುಂದೆ ನಿಂತು ಮಾಡುತ್ತಿದೆ. ಆದರೆ, ಇವರ ಗೊಡ್ಡು ಬೆದರಿಕೆಗಳಿಗೆ, ಸಂವಿಧಾನ ವಿರೋಧಿ ನಡೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಡಿ ಅಧಿಕಾರಿಗಳಿಗೆ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಹುಡುಕುವ ಉದ್ದೇಶವೇ ಇಲ್ಲ. ಈ ತನಿಖೆ ನೆಪ ಮಾತ್ರವಾಗಿದ್ದು, ರಾಜ್ಯ ಕಾಂಗ್ರೆಸ್ ರ್ಕಾರವನ್ನು ಬುಡಮೇಲು ಮಾಡುವುದೇ ಇಡಿ ಅಧಿಕಾರಿಗಳ ತನಿಖೆಯ ಉದ್ದೇಶ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದರು.