ಮಂಡ್ಯ: ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿದ್ದ ಬಸ್ ನಿಲ್ದಾಣವನ್ನು ಕೆಶಿಪ್ ವತಿಯಿಂದ ನಡೆಯುತ್ತಿರುವ ಜಲಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ವೇಳೆ ಬಸ್ ನಿಲ್ದಾಣ ತೆರವು ಮಾಡಲಾಗಿತ್ತು. ತೆರವು ಮಾಡಿರುವ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ಹಾಗೂ ಕರವೇ ವತಿಯಿಂದ ಕರವೇ ತಾ.ಅಧ್ಯಕ್ಷ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಹೈಟೆಕ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಕೆಶಿಫ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಸ್ ನಿಲ್ದಾಣ ಇಲ್ಲದ ಕಾರಣ ಸಾಕಷ್ಟು ತೊಂದರೆ ಆಗುತ್ತಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಗಾಗಿ ಕಾಯಲು ಮಳೆ, ಬಿಸಿಲಿನಲ್ಲಿ ನಿಂತುಕೊಳ್ಳಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು ಮಳೆಯ ನೀರಿನಿಂದ ತೊಯ್ದು ಹಾಳಾಗುತ್ತಿವೆ. ಇದಲ್ಲದೆ ಇತರೆ ಪ್ರಯಾಣಿಕರು ಸಹ ಬಸ್ಸಿಗಾಗಿ ಬಿಸಿಲು- ಮಳೆಯಲ್ಲಿ ಕಾಯುವಂತಾಗಿದೆ. ಬಸ್ ನಿಲ್ದಾಣ ವನ್ನು ನಿರ್ಮಿಸಿಕೊಡಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಕೆಶಿಫ್ ಕಚೇರಿಯ ಮುಂದೆ ಬೃಹತ್ ತಮಟೆ ಚಳವಳಿ ನಡೆಸಲಾಗುವುದು. ಹೆದ್ದಾರಿ ಕಾಮಗಾರಿ ತಡೆದು ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬೋರೇಗೌಡ, ಸಂತೋಷ್, ಗ್ರಾ.ಪಂ.ಸದಸ್ಯ ಆರ್. ಶ್ರೀನಿವಾಸ್, ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.