ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿಕೆಯೊಂದನ್ನು ನೀಡಿದ್ದು, ಈ ಹಣವನ್ನು ಲೋಕಸಭಾ ಚುನಾವಣೆ ವೇಳೆ ಅಪಾರ ಪ್ರಮಾಣದ ಮದ್ಯ ಖರೀದಿಸಲು ಬಳಸಿರುವುದು ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
ನಿಗಮದ ಹಣ ದುರ್ಬಳಕೆ ಸಂಬಂಧ ಪೊಲೀಸರು ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ನಾಲ್ಕು ರಾಜ್ಯಗಳ ೨೩ ಸ್ಥಳಗಳಲ್ಲಿ ಈಚೆಗೆ ಶೋಧಕಾರ್ಯ ನಡೆಸಲಾಗಿತ್ತು ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಸೇರಿದ ಮನೆ/ಕಚೇರಿಗಳಲ್ಲಿ ಶೋಧ ನಡೆಸಲಾಗಿತ್ತು. ನಿಗಮದ ಖಾತೆಯಿಂದ ವರ್ಗಾವಣೆ ಮಾಡಿಕೊಂಡ ೮೯.೬೨ ಕೋಟಿಯಲ್ಲಿ ಅಪಾರ ಪ್ರಮಾಣದ ಮೊತ್ತವನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧೆಡೆಗೆ ವರ್ಗಾವಣೆ ಮಾಡಿರುವುದನ್ನು ದೃಢಪಡಿಸುವ ದಾಖಲೆಗಳು ಶೋಧದ ವೇಳೆ ಪತ್ತೆಯಾಗಿವೆ ಎಂದು ಇ.ಡಿ ಹೇಳಿದೆ.
ನಿಗಮದ ಹಣವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಬ್ಯಾಂಕ್‌ಗಳ ೧೮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಆ ಖಾತೆಗಳಿಂದ ಹಲವು ಶೆಲ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿತ್ತು. ಹವಾಲಾ ಮೂಲಕ ನಗದು ಮತ್ತು ಚಿನ್ನದ ರೂಪದಲ್ಲೂ ಹಣ ಸಾಗಣೆ ಮಾಡಲಾಗಿದೆ. ಈ ಎಲ್ಲಾ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ನಾಗೇಂದ್ರ ಮತ್ತು ಬಸನಗೌಡ ಅವರ ಮನೆ ಶೋಧದ ವೇಳೆ ಪತ್ತೆಯಾಗಿವೆ. ತನಿಖೆ ಮುಂದುವರೆದಿದೆ ಎಂದು ಇ.ಡಿ ತಿಳಿಸಿದೆ.