Sunday, April 20, 2025
Google search engine

Homeರಾಜ್ಯಕಪಿಲ ನದಿಗೆ 70 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ: ಮಾದಾಪುರ ಸೇತುವೆ ಮುಳುಗಡೆ

ಕಪಿಲ ನದಿಗೆ 70 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ: ಮಾದಾಪುರ ಸೇತುವೆ ಮುಳುಗಡೆ

ಮನೆಗಳ ಕುಸಿತ, ಕರು ಸಾವು, ಹೆದ್ದಾರಿಯಲ್ಲಿ ಹರಿದ ನೀರು

ಮೈಸೂರು: ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಕಪಿಲ ನದಿಗೆ ೭೦ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಮಾದಾಪುರದಿಂದ ಬೆಳತ್ತೂರು, ಚಕ್ಕೂರು, ಅಡಹಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.

ಈ ಹಿನ್ನಲೆ ಜನರು ಹಾಗೂ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗದ ಮೂಲಕ ಜನರು, ವಾಹನ ಸವಾರರು ಸುತ್ತಿಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸೇತುವೆ ಮೇಲೆ ಜನರು ಸಂಚರಿಸದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ಆದಾಗ್ಯೂ ಕೆಲವು ಯುವಕರು ಅಪಾಯವನ್ನೂ ಲೆಕ್ಕಿಸದೆ ಸೇತುವೆ ಮೇಲೆ ಸಂಚರಿಸುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು.


ನದಿ ಪಾತ್ರದ ಗ್ರಾಮದವರು ನದಿಯತ್ತ ತೆರಳದಂತೆ ಸೂಚನೆ ನೀಡಲಾಗಿದೆ. ಹಂಪಾಪುರ ಸಮೀಪದ ಹೊಮ್ಮರಗಳ್ಳಿಯಿಂದ ಹುಲ್ಲಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗುವ ಸಾಧ್ಯತೆ ಇದೆ. ಈ ಸೇತುವೆ ೨೦೧೯ರಲ್ಲಿ ಮುಳುಗಡೆಯಾಗಿತ್ತು. ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಬಳಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಡಿಗಳಷ್ಟು ನೀರು ಹರಿದುಬಂದಿದೆ.

ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದೇಬೂರು ಪಂಪ್‌ಹೌಸ್ ಮುಳುಗಡೆಯಾಗಿದ್ದು, ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಶ್ರೀಕಂಠೇಶ್ವರ ದೇವಸ್ಥಾನದ ಎದುರು, ಕಪಿಲ ನದಿಯ ಸ್ನಾನಘಟ್ಟದಲ್ಲಿನ ಪೂಜಾ ಸಾಮಗ್ರಿ ಮಾರಾಟದ ಪೆಟ್ಟಿಗೆ ಅಂಗಡಿಗಳು ಭಾಗಶಃ ಮುಳುಗಿವೆ. ಮುಡಿಕಟ್ಟೆ, ಸಾರ್ವಜನಿಕ ಶೌಚಾಲಯಗಳಿಗೆ ನೀರು ನುಗ್ಗಿದೆ. ಪರಶುರಾಮ ಗುಡಿಯೂ ಭಾಗಶಃ ಮುಳುಗಿದೆ. ಸಮೀಪದ ಹದಿನಾರುಕಾಲು ಮಂಟಪ ಬಹುತೇಕ ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿರುವ ಐದು ಸ್ಮಶಾನಗಳು ಜಲಾವೃತವಾಗಿವೆ. ಅಲ್ಲಿ ಈಗ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ನಂಜನಗೂಡು ತಾಲ್ಲೂಕಿನ ಸುತ್ತೂರು ಬಳಿ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಗರದಲ್ಲಿ ಬೆಳಿಗ್ಗೆಯಿಂದ ಜೋರು ಮಳೆ ದಿನವಿಡೀ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ ಬೀಸುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.

RELATED ARTICLES
- Advertisment -
Google search engine

Most Popular