ಸರಗೂರು : ಜಿಪಂ ಸಿಇಓ ಕೆ.ಎಂ. ಗಾಯಿತ್ರಿ ಸರಗೂರು ತಾಲ್ಲೂಕಿನ ನುಗು ಜಲಾಶಯ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ಕೇರಳ ಹಾಗೂ ಹೆಚ್.ಡಿ.ಕೋಟೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಬಹುದು. ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಾಗೃತಿ ಮೂಡಿಸಬೇಕು, ಅಗತ್ಯವಿದ್ದರೆ ಸ್ಥಳಾಂತರ ಮಾಡಲು ಅಗತ್ಯ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಿಥಿಲವಾಗಿರುವ ಕಬಿನಿ ಜಲಾಶಯದಲ್ಲಿನ ನೀರು ಬಿಡುಗಡೆ ಗೇಟ್ ಕೊಠಡಿಯನ್ನು ತಕ್ಷಣ ದುರಸ್ಥಿ ಮಾಡಿಸಿಕೊಳ್ಳುವಂತೆ ಹಾಗೂ ಜಲಾಶಯದ ಬಳಿ ಸಾರ್ವಜನಿಕರು ಬಾರದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.
ತುಂಬುಸೋಗೆ ಬಳಿಯ ಸೇತುವೆ ಬಳಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹೆಚ್ಚುವರಿ ನೀರು ಬಿಟ್ಟರೆ ಸೇತುವ ಮುಳುಗುವ ಭೀತಿ ಇದೆ. ಸಾರ್ವಜನಿಕರು ಸೇತುವೆ ಬಳಿ ತೆರಳದಂತೆ ಕ್ರಮವಹಿಸಬೇಕು ಎಂದರು.
ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಸರಗೂರು ತಾಪಂ ಇಓ ಸುಷ್ಮಾ ಕೆ., ಹೆಚ್.ಡಿ ಕೋಟೆ ತಾಪಂ ಇಓ ಧರಣೇಶ್ ಎಸ್.ಪಿ., ಇಂಜಿನಿಯರ್‌ಗಳಾದ ರಂಜಿತ್, ಗೋವಿಂದ ನಾಯಕ ಮತ್ತಿತರರು ಇದ್ದರು.