Sunday, April 20, 2025
Google search engine

Homeಸ್ಥಳೀಯಬೊಕ್ಕಳ್ಳಿ ಗಂಜಿ ಕೇಂದ್ರಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ

ಬೊಕ್ಕಳ್ಳಿ ಗಂಜಿ ಕೇಂದ್ರಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ

ಮೈಸೂರು: ನೆರೆಯಿಂದ ನಿರಾಶ್ರಿತರಾಗಿರುವ ಬೊಕ್ಕಳ್ಳಿ ಗ್ರಾಮಸ್ಥರಿಗೆ ಅಧಿಕಾರಿಗಳು ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.

ನಂಜನಗೂಡು ತಾಲ್ಲೂಕು ಹೆಜ್ಜಿಗೆ, ತೊರೆಮಾವು, ಬೊಕ್ಕಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕಬಿನಿ ನೀರಿನಿಂದ ಮುಳುಗಡೆಯಾಗಿರುವ ಪ್ರದೇಶಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಬೊಕ್ಕಳ್ಳಿ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಅವರೆಲ್ಲರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೆರೆಬಂದಾಗ ಪ್ರತಿಬಾರಿಯೂ ಇಲ್ಲಿ ತೊಂದರೆಯಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಕ್ಕೆ ತಂದು ೨ ಎಕರೆ ಜಾಗದಲ್ಲಿ ಮುಳುಗಡೆಯಾಗುತ್ತಿರುವ ಕುಟುಂಬದವರಿಗೆ ನಿವೇಶನ ನೀಡಿ ಸ್ಥಳಾಂತರಿಸಲಾಗುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಜನರನ್ನು ತಪಾಸಣೆ ನಡೆಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆವಹಿಸಬೇಕು. ಜಾನುವಾರುಗಳಿಗೆ ಮೇವು, ಲಸಿಕೆ ನೀಡಬೇಕು.

ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು ಗಂಜಿ ಕೇಂದ್ರದಲ್ಲಿರುವ ಕುಟುಂಬದವರಿಗೆ ಪ್ರತಿ ಮನೆಗೆ ೩ ಸಾವಿರ ರೂಗಳನ್ನು ವೈಯಕ್ತಿಕವಾಗಿ ನೀಡಿದ ಅವರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಎಲ್ಲಾ ಡ್ಯಾಂಗಳು ತುಂಬಿ ತುಳುಕುತ್ತಿವೆ, ಜನರು ನೆಮ್ಮದಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಕ್ಷಿತ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜ್, ತಹಸೀಲ್ದಾರ್ ಶಿವಕುಮಾರ್, ಇ.ಓ. ರಾಜೇಶ್, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ದೊರೆಸ್ವಾಮಿ, ಮಂಜುಳಾ ಮಂಜುನಾಥ್, ಛಾಯಾ, ಕನಕಮೂರ್ತಿ, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ನಾಗರಾಜು ಹಾಜರಿದ್ದರು.

RELATED ARTICLES
- Advertisment -
Google search engine

Most Popular