Monday, April 21, 2025
Google search engine

Homeರಾಜ್ಯಸುದ್ದಿಜಾಲಕನ್ನಡ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ: ಬಸವರಾಜೇಗೌಡರು

ಕನ್ನಡ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ: ಬಸವರಾಜೇಗೌಡರು

ಚನ್ನಪಟ್ಟಣ: ಕನ್ನಡ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ಕೈ ಜೋಡಿಸಿ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಜೀರ್ಣೋದ್ದಾರ ಮಾಡಿರುವ ಡಾ. ಚಿಕ್ಕಕೊಮಾರಿಗೌಡರ ಸೇವೆ ಶ್ಲಾಘನೀಯ ಎಂದು ರಾಮನಗರ ಶಿಕ್ಷಣ ಇಲಾಖೆಯ ಜಿಲ್ಲೆ ಉಪನಿರ್ದೇಶಕ ಬಸವರಾಜೇಗೌಡರು ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರು ಆರಂಭಿಸಿರುವ ಸರ್ಕಾರಿ ಕನ್ನಡ ಶಾಲೆಗಳು ಉಳಿಯಲಿ ಎಂಬ ಆಂದೋಲನಕ್ಕೆ ಕೈ ಜೋಡಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸಮಾಜ ಸೇವಕರಾದ ಡಾ.ಚಿಕ್ಕಕೊಮಾರಿಗೌಡರು ಶಾಲೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ತಾಲೂಕಿನ ಶಿಕ್ಷಕರು ಶಿಕ್ಷಣಾಧಿಕಾರಿಗಳ ಜೊತೆ ಸಭೆ ಮಾಡಲು ಸೂಕ್ತ ಸ್ಥಳಾವಕಾಶ ಇಲ್ಲದಿರುವುದನ್ನು ಮನಗಂಡು ಬಿಇಒ ಮರೀಗೌಡರ ಮನವಿ ಮೇರೆಗೆ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ನಿರ್ಮಾಣ ಮಾಡಿರುವ ಡಾ. ಸಿಕೆಎನ್ ಸಭಾಂಗಣದ ಉದ್ಘಾಟನಾ ಸಮಾರಂಭ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ಇದಕ್ಕೆ ಪೋಷಕರ ಆಂಗ್ಲ ವ್ಯಾಮೋಹವೇ ಕಾರಣವಾಗಿದೆ. ನಾನು ಇಂದು ಡಿಡಿಪಿಐ ಆಗಿದ್ದೇನೆ ಎಂದರೆ ಇದಕ್ಕೆ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ಬೆಳಕೆರೆ ಅಪ್ಪಾಜಿಗೌಡರು ಹಾಗೂ ಕೆ. ರಾಮಲಿಂಗಯ್ಯ ಅವರು ಕಾರಣರು. ಅವರು ನಮ್ಮ ಮುಂದಿನ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟರು. ಈ ನಿಟ್ಟಿನಲ್ಲಿ ಯಾರು ಏನೇ ಸಾಧನೆ ಮಾಡಿದರೂ ಅದು ಮೊದಲ ಗುರು ತಾಯಿ ಹಾಗೂ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರ ಕೊಡುಗೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಪ್ರಾಥಮಿಕ ಶಾಲೆಯನ್ನು ಕನ್ನಡ ಭಾಷೆಯಲ್ಲಿ ಕಲಿತಾಗ ಅದರಿಂದ ಅವರಲ್ಲಿ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಜೊತೆಗೆ ಕನ್ನಡ ಭಾಷೆಯನ್ನು ಹೇಗಾದರೂ ಕಲಿಯಬಹುದು ಅದರಲ್ಲಿ ಮನರಂಜನೆಯನ್ನು ಕಾಣುತ್ತಾ ಕಲಿಯಬಹುದು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಎಂದು ಬಸವರಾಜೇಗೌಡರು ಕಿವಿ ಮಾಡು ಹೇಳಿದರು.

ತಾಲೂಕಿನಲ್ಲಿ ಶಿಕ್ಷಕರು ಸಭೆ ಮಾಡಲು ಒಂದು ವೇದಿಕೆ ಬೇಕಿತ್ತು. ಚಿಕ್ಕಕೊಮಾರಿಗೌಡರು ಇಳಿವಯಸ್ಸಿನಲ್ಲಿ ನನಗೆಕೆ ಸಮಾಜ ಸೇವೆ ಎಂದು ಮೊಮ್ಮಕ್ಕಳ ಜೊತೆ ಇರಬಹುದುದಿತ್ತು. ಆದರೆ ಅವರಿಗೆ ತಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಛಲ ಇರುವುದರಿಂದ ಈ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಜೀರ್ಣೋದ್ಧಾರ ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದ್ದು, ಈ ಸಭಾಂಗಣದಲ್ಲಿ ಸಭೆ ಮಾಡಲು ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಕುರ್ಚಿಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಇಂದು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಆದರೆ ಎಲ್ಲವನ್ನು ಸರ್ಕಾರವೇ ಮಾಡಲಾಗದು, ಈ ನಿಟ್ಟಿನಲ್ಲಿ ಎಲ್ಲೆಡೆ ಶಾಲೆಗಳನ್ನು ದತ್ತು ಪಡೆಯುವ ಕಾರ್ಯ ನಡೆಯುತ್ತಿದೆ. ಆದರೆ ಉಳ್ಳವರೆಲ್ಲಾ ಶಾಲೆಗಳನ್ನು ದತ್ತು ಪಡೆಯುತ್ತಿಲ್ಲ. ಚಿಕ್ಕಕೊಮಾರಿಗೌಡರು, ರವಿಕುಮಾರ್‌ಗೌಡರಂತಹ ದಾನಿಗಳು ಶಾಲೆಗಳನ್ನು ದತ್ತು ಪಡೆದು ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಅಗತ್ಯ ಇದೆ. ಅಲ್ಲದೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ದಾನಿಗಳು, ಉಳ್ಳವರನ್ನು ಸಂಪರ್ಕಿಸಿ ಅವರಿಂದ ಶಾಲೆಗಳನ್ನು ದತ್ತು ಸ್ವೀಕಾರ ಮಾಡಲು ಪ್ರೇರೇಪಣೆ ಮಾಡುತ್ತಿರುವುದೇ ಒಂದು ದೊಡ್ಡ ಸಾಧನೆ ಇಂತಹ ಕೆಲಸಕ್ಕೆ ಮುಂದಾಗಿರುವ ರಮೇಶ್‌ಗೌಡರ ಕಾರ್ಯ ಪ್ರಶಂಶನೀಯವಾಗಿದೆ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದನ್ನು ಸಾಧಿಸುತ್ತಾರೆ. ನಿವೃತ್ತಿಯ ಬಳಿಕ ನಾನೂ ಕೂಡ ಅವರ ಜೊತೆಯಾಗಿ ನಿಲ್ಲುತ್ತೇನೆ. ಹೋರಾಟಗಳಲ್ಲಿ ಭಾಗಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಲು ಕೈ ಜೋಡಿಸುತ್ತೇನೆ ಎಂದರು.

ಆರ್ಟ್ ಆಫ್ ಲೀವಿಂಗ್‌ನ ರವಿಕುಮಾರ್‌ಗೌಡಅವರು ಮಾತನಾಡಿ, ಕನ್ನಡ ಶಾಲೆಯಲ್ಲಿ ವಿದ್ಯೆ ಕಲಿತ ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಯುವ ಜೊತೆಗೆ ಎಲ್ಲಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಗ್ರವಾಗಿ ಸದೃಢರಾಗುತ್ತಾರೆ. ಉತ್ತಮ ಸಮಾಜ ಕಟ್ಟುವಲ್ಲಿ ನಮ್ಮ ದೇಹವೇ ಪ್ರಥಮವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಲಾದ ಸೇವೆ ಮಾಡಬೇಕು ಎಂದರು. ಸರ್ಕಾರಿ ಶಾಲೆಯ ಉಳಿವಿಗಾಗಿ ಸೇವೆ ಶಾಲೆಯನ್ನು ದತ್ತು ಪಡೆದಿರುವ ಚಿಕ್ಕ ಕೊಮಾರಿಗೌಡರ ಕಾರ್ಯ ಶ್ಲಾಘನೀಯವಾಗಿದ್ದು, ಶಿಕ್ಷಕರ ಭವನದ ಕನಸು ನನಸಾಗದೆ ಉಳಿದಿದ್ದು, ಗುರುಭವನ ನಿರ್ಮಾಣಕ್ಕೆ ಮುಂದಾದರೆ ನಾನೂ ಸಹ ಸಹಕಾರ ಮಾಡುತ್ತೇನೆ ಎಂದರು. ಜೊತೆಗೆ ಬಿಇಒ ಮರೀಗೌಡರು ಸದಾ ಸರಳರಾಗಿ ಶಿಕ್ಷಣಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಇದೇ ತಿಂಗಳು ನಿವೃತ್ತಿಯಾಗುತ್ತಿದ್ದು ಅವರ ಮುಂದಿನ ಜೀವನ ಶಿಕ್ಷಣ ಕ್ಷೇತದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಮೀಸಲಾಗಲಿ ಎಂದರು ಆಶಯ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಮೋಹನ್ ಅವರು ಮಾತನಾಡಿ, ಹಣವನ್ನು ದಾನ ಮಾಡದೆ, ಸ್ವಂತಕ್ಕೆ ಖರ್ಚು ಮಾಡದೆ ಬಿಟ್ಟರೆ ನಾಶ ಆಗುತ್ತದೆ ಎಂಬ ಗಾದೆ ಇದೆ. ನಾವು ಮಾಡುವ ಒಳ್ಳೆಯ ಕಾರ್ಯಗಳು ಮತ್ತು ಸಮಾಜಕ್ಕೆ ನೀಡುವ ಕೊಡುಗೆಗಳು ನಾವು ಮಣ್ಣಾದರೂ ನಾವು ಸಮಾಜದಲ್ಲಿ ಜೀವಂತ ಇರುವಂತೆ ಮಾಡುತ್ತವೆ, ಈ ನಿಟ್ಟಿನಲ್ಲಿ ಚಿಕ್ಕಕೊಮಾರಿಗೌಡರು ತಮ್ಮ ಸಂಪಾದನೆಯಲ್ಲಿ ಕೊಂಚ ಹಣವನ್ನು ಸಮಾಜ ಸೇವೆಗೆ ಮೀಸಲಿಟ್ಟಿರುವುದು ಶ್ಲಾಘನೀಯವಾಗಿದೆ ಎಂದರು.

ಸಾಂತ್ವನ ಸಂಗೀತ ಪೌಂಡೇಷನ್‌ನ ಸಂಸ್ಥಾಪಕರಾದ ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ ಅವರು ಮಾತನಾಡಿ, ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರು ಸೇರಿದಂತೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರೆಲ್ಲಾ ಸರ್ಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರೇ ಆಗಿದ್ದಾರೆ. ಆದರೆ ಇಂದು ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ನಮ್ಮೂರ ಶಾಲೆಯಲ್ಲಿ ಮಕ್ಕಳೆ ಇಲ್ಲವಾಗಿದೆ. ನಾನೂ ಸೇರಿದಂತೆ ನಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ಬೇಕೆಂದು ಕೇಳುವ ಪೋಷಕರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಶಾಲೆ ಉಳಿಯಬೇಕು ಎಂದು ರಮೇಶ್‌ಗೌಡರು ನಡೆಸುತ್ತಿರುವ ಆಂದೋಲನಕ್ಕೆ ಕೈ ಜೋಡಿಸಿರುವ ಚಿಕ್ಕಕೊಮಾರಿಗೌಡರ ಕಾರ್ಯ ಪ್ರಶಂಸನೀಯವಾಗಿದ್ದು, ಸರ್ಕಾರಿ ಶಾಲೆ ಉಳಿವಿಗೆ. ಹಾಗೂ ಶಿಕ್ಷಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಸಾಂತ್ವನ ಪೌಂಡೇಷನ್‌ನಿಂದ ಯಾವುದೇ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ,.ವಿ.ಗಿರೀಶ್‌ಅವರು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಸಮಾಜದಲ್ಲಿ ಏನಾದರೂ ಸಾಧನೆ ಮಾಡುವ ಧೈರ್ಯ ಮಕ್ಕಳಲ್ಲಿ ಬರುತ್ತದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ನಾನು ಸದಾ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮಾತನಾಡಿ, ಪೋಷಕರ ಆಂಗ್ಲ ವ್ಯಾಮೋಹದಿಂದ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ನಡೆಸುತ್ತಿರುವ ಆಂದೋಲನಕ್ಕೆ ಚಿಕ್ಕಕೊಮಾರಿಗೌಡರು ಹಾಗೂ ಅವರ ಕುಟುಂಬ ಸಂಪೂರ್ಣ ಸಹಕಾರ ನೀಡಿದ್ದು, ಅವರು ಮಾಡಿರುವ ಸೇವೆ ಅವರ ಕುಟುಂಬದ ಗೌರವಕ್ಕೆ ಕಳಶವಾಗುತ್ತದೆ ಎಂದರು. ಬಿಇಒ ಮರೀಗೌಡರು ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬರುವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಲು ಶ್ರಮಿಸಿದ್ದಾರೆ. ಇವರ ಸೇವೆಗೆ ನಿವೃತ್ತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಬಿಇಒ ಆಗಿ ಇವರು ನಿವೃತ್ತಿ ಆದರೂ ಇವರ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಶುಭಕೋರಿದರು.

ಅಭಿನಂದನೆ ಸ್ವೀಕಾರ ಮಾಡಿದ ಚಿಕ್ಕಕೊಮಾರಿಗೌಡರು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಈ ನಿಟ್ಟಿನಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳನ್ನು ಆಕರ್ಷಣೆ ಮಾಡಲು ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯ ಇದೆ. ಆದರೆ ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಎಂಬ ನಿಟ್ಟಿನಲ್ಲಿ ರಮೇಶ್‌ಗೌಡರು ಸರ್ಕಾರಿ ಶಾಲೆಗಳನ್ನು ಉಳಿಸುವ ಆಂದೋಲನ ಮಾಡಿ ಉಳ್ಳವರು, ಸಮಾಜ ಸೇವಕರನ್ನು ಸಂಪರ್ಕಿಸಿ ಈ ಬಗ್ಗೆ ಅರಿವು ಮೂಡಿಸುತ್ತಿದ್ದು ಇದೇ ನಿಟ್ಟಿನಲ್ಲಿ ನನ್ನ ಬಳಿ ಶಾಲೆಯನ್ನು ದತ್ತು ಪಡೆಯಲು ಪ್ರಸ್ತಾಪ ಮಾಡಿದ ವೇಳೆ ಅವರ ಆಶಯ ನಮ್ಮ ಕುಟುಂಬಕ್ಕೆ ಉತ್ತಮ ನಿರ್ಣಯ ತೆಗೆದುಕೊಳ್ಳಲು ಪ್ರೇರೇಪಣೆಯಾಗಿದೆ. ಈ ನಿಟ್ಟಿನಲ್ಲಿ ನನ್ನ ಕೈಲಾದ ಸಹಕಾರ ಮಾಡಿದ್ದೇವೆ ಎಂದರು.

ಸಂದರ್ಭದಲ್ಲಿ ಡಾ. ಚಿಕ್ಕಕೊಮಾರಿಗೌಡ ಮತ್ತು ಅವರ ಕುಟುಂಬದ ಶಿಕ್ಷಣ ಪ್ರೇಮ ಸ್ಮರಣಾರ್ಹ. ೮೪ರ ವಯೋಮಾನದಲ್ಲಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಅಂದಾಜು ೧೦ ಲಕ್ಷ ರೂ. ಹಣ ವಿನಿಯೋಗಿಸಿ ಶಾಲಾಭಿವೃದ್ಧಿ ಮತ್ತು ಶಿಕ್ಷಕರಿಗೆ ಅಗತ್ಯವಾದ ಸಭಾಂಗಣದ ಮೇಲ್ಛಾವಣಿ ಹಾಕಿಸಿಕೊಟ್ಟ ಈ ಕುಟುಂಬವನ್ನು ಅಭಿನಂದಿಸಲಾಯಿತು ಜೊತೆಗೆ ಬಿಇಒ ಮರೀಗೌಡರನ್ನು ಅಭಿನಂದಿಸಲಾಯಿತು.
ಸಾಹಿತಿ ವಿಜಯ್ ರಾಂಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಪಾದಕರಾದ ಸು.ತ ರಾಮೇಗೌಡ ನಗರಸಭಾ ಹಿರಿಯ ಸದಸ್ಯರಾದ ವಾಸಿಲ್ ಆಲಿ ಖಾನ್, ಸುಮಾ ರವೀಶ್, ಕಮಲಾರಾಮು, ಮಂಗಳಮ್ಮ, ಮದ್ಯಾಹ್ನದ ಬಿಸಿಯೂಟದ ಜಿಲ್ಲಾ ಸಹಾಯಕ ಶಂಕರೇಗೌಡ, ನಿ. ಪ್ರಾಂಶುಪಾಲರು ನಿಂಗೇಗೌಡ (ಎನ್.ಜಿ.) ಪ್ರಾಥಮಿಕ ಶಿಕ್ಷಣದ ಸಂಘದ ಕಾರ್ಯದರ್ಶಿ ಮಹದೇವ, ಪಂಚಾಯತ್ ರಾಜ್ ಪರಿಷತ್ ಗೋರ್ಪಡೆ, ಚಿಕ್ಕಕೊಮಾರಿಗೌಡರ ಪತ್ನಿ ಲಿಂಗಮ್ಮ, ಸುಷ್ಮಾ ಶಾಂತಕುಮಾರ್,ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್. ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಣ್ಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸುಧಾ, ಗಂಗಾಧರಮೂರ್ತಿ, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ವಿಷಕಂಠಯ್ಯ, ಸರ್ಕಾರಿ ಸಂಘದ ಪದಾಧಿಕಾರಿಗಳು ಧನಂಜಯ ಕೃಷ್ಣ, ಶಿಕ್ಷಕರಾದ ಪಂಚಲಿಂಗಯ್ಯ, ಮಂಜುಳ, ಲ್ಯಾಬ್ ಚಂದ್ರು ಮಾಧ್ಯಮಿಕ ಶಿಕ್ಷಕರ ಸಂಘದ ತಾಲ್ಲೂಕು ರಂಗನಾಥ್, ಬಿ.ಇ.ಒ ಕಛೇರಿಯ ಅಧೀಕ್ಷರಾದ ಪ್ರಶಾಂತ್ ಶರ್ಮ, ಟಿ.ಪಿ.ಇ.ಒ. ಭಾರತಿ ಬಬ್ಬಲೇಶ್ವರ, ಇ.ಸಿ.ಓ. ಬಿ.ಆರ್.ಪಿ.ಗಳು ಸಿ, ಆರ್, ಪಿ ಗಳು, ಕೃಷ್ಣಕುಮಾರ್, ಶಾರದಮ್ಮ, ಸುಧಾಮಣಿ ಶಾಂತಮ್ಮ, ಕರೀಗೌಡ, ಶಿವರಾಜು, ಹೊನ್ನಯ್ಯ, ಸಿದ್ದರಾಮಯ್ಯ, ಮಂಜುಳಾ, ವೀಣಾ, ಲಕ್ಷ್ಮಮ್ಮ, ತಾಲ್ಲೂಕಿನ ಎಲ್ಲಾ ಹಿರಿಯ/ಕಿರಿಯ ಪ್ರಾಥಮಿಕ ಶಾಲೆಗಳ ನಲಿಕಲಿ ಬೋಧಿಸುವ ಶಿಕ್ಷಕರುಗಳು ಭಾಗವಹಿಸಿದ್ದರು.

ಹನುಮಂತನಗರದ ವೆಂಕಟರಮಣ, ಚಿಕ್ಕಣ್ಣಪ್ಪ, ನಾಗವಾರ ಜಯರಾಮಣ್ಣ, ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ಬಾಳೆಕಾಯಿ ಮಂಡಿ ಕುಮಾರ್ ಜಗದಾಪುರ ಕೃಷ್ಣೇಗೌಡ, ಅನಂತಪುರ ಏಸು, ಗುರು, ಹಾರೋಕೊಪ್ಪ ಪ್ರೇಮ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಸುಧಾಮಣಿ, ಶಿಕ್ಷಣ ಸಂಯೋಜಕರಾದ ಜಿನ್ನ, ರಾಜಲಕ್ಷ್ಮಿ, ಕಾರ್ತಿಕ್‌ಗೌಡ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಜೈ ಕುಮಾರ್, ಗೋವಿಂದಹಳ್ಳಿ ಶಿವಣ್ಣ, ಚೌ.ಪು. ಸ್ವಾಮಿ, ಲಕ್ಷ್ಮಿ ಗೊ.ರಾ. ಶ್ರೀನಿವಾಸ್, ಡಿ.ಎಸ್.ಎಸ್. ವೆಂಕಟೇಶ್ (ಸೇಠು), ಶ್ಟ್ಟಿಗನಹೊಸಹಳ್ಳಿ ರಮೇಶ್, ಕುಮಾರ್, ಮೆಣಸಿಗನಹಳ್ಳಿ ರಾಮಕೃಷ್ಣ ರಾಜ್ಯ ಉಪಾಧ್ಯಕ್ಷರಾದ ರಂಜಿತ್‌ಗೌಡ, ಚಿಕ್ಕೇನಹಳ್ಳೀ ಸಿದ್ದಪ್ಪಾಜಿ, ಬೀರೇಶ್, ರವಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಣ ಸಂಯೋಜಕರಾದ ಚಕ್ಕೆರೆ ಯೋಗೇಶ್ ಚಕ್ಕೆರೆ ನಡೆಸಿಕೊಟ್ಟರು. ವೇದಿಕೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರು ವೃಂದ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular