ಮಂಗಳೂರು(ದಕ್ಷಿಣ ಕನ್ನಡ): ಶಾಲೆಗಳ ಮೈದಾನದಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾದ ಮಂಗಳೂರು ದಕ್ಷಿಣ ಘಟಕದ ನೇತೃತ್ವದಲ್ಲಿ ಮಂಗಳೂರು ನಗರದ ಮಿನಿ ವಿಧಾನಸೌಧ ಗಡಿಯಾರ ಗೋಪುರದ ಬಳಿ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಯಿತು.
ಬಿಜೆಪಿ ದಕ್ಣಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭ ಮಾಡಿದ್ದು, ಇದನ್ನು ಹಳ್ಳಿ ಹಳ್ಳಿಗಳಲ್ಲೂ ಮಾಡುತ್ತೇವೆ ಎಂದರು.
ಸರ್ಕಾರಿ ಶಾಲೆಗಳು ಕಾಂಗ್ರೆಸ್‌ನವರ ಅಪ್ಪನ ಆಸ್ತಿ ಅಲ್ಲ. ಶಾಲೆಗಳಲ್ಲಿ, ಹಾಗೂ ಅವುಗಳ ಮೈದಾನಗಳಲ್ಲಿ ನೂರಾರು ವರ್ಷಗಳಿಂದ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್ ಅವರ ನೇತೃತ್ವದಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆ ಶುರುವಾಗಿತ್ತು ಎಂದರು.