ಚಿಂತಾಮಣಿ: ಚಿಂತಾಮಣಿ-ದಿಬ್ಬೂರಹಳ್ಳಿ-ಬಾಗೇಪಲ್ಲಿ ರಸ್ತೆಯ ಮಹ್ಮದ್ ಪುರ ಗೇಟ್ ಸಮೀಪ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರದ ಡೆಕ್ಕನ್ ಆಸ್ಪತ್ರೆಯ ಬಳಿ ವಾಸವಾಗಿದ್ದ ಆರೋಗ್ಯ ಇಲಾಖೆಯ ನಿವೃತ್ತ ನಿರೀಕ್ಷಕ ವೆಂಕಟರವಣಪ್ಪ(೬೬) ಮೃತಪಟ್ಟ ಸವಾರ. ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿಯಾಗಿದ್ದ ವೆಂಕಟರವಣಪ್ಪ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಮದುವೆಯಾಗಿದ್ದು ನಗರದಲ್ಲಿ ವಾಸವಾಗಿದ್ದರು. ಕಾರಿನಲ್ಲಿದ್ದ ಮಾಲೀಕ ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತನ್ನ ದ್ವಿಚಕ್ರವಾಹನದಲ್ಲಿ ನಗರಿಂದ ಗಂಜಿಗುಂಟೆಗೆ ಹೋಗುತ್ತಿದ್ದಾಗ ಎದರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಬಾಗೇಪಲ್ಲಿ ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ಮುಗುಚಿಬಿದ್ದಿದೆ. ಕಾರು ಚಾಲಕನ ಹಿಡಿತ ತಪ್ಪಿ ಗಿಡಗಳ ನಡುವೆ ಗುಂಡಿಯಲ್ಲಿ ಹೋಗಿ ನಿಂತಿದೆ.
ವೆಂಕಟರಮಣಪ್ಪ ಸುಮಾರು ೩೦ ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆರೋಗ್ಯ ನಿರೀಕ್ಷಕರಾಗಿ ಕಳೆದ ೬ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಗಂಜಿಗುಂಟೆ ಗ್ರಾಮದಲ್ಲಿ ಕೃಷಿ ಜಮೀನು ಇದ್ದು, ಕೃಷಿ ಮಾಡಿಸಲು ಪ್ರತಿನಿತ್ಯ ಬೈಕ್‌ನಲ್ಲಿ ಗಂಜಿಗುಂಟೆಗೆ ಹೋಗಿಬರುತ್ತಿದ್ದರು ಎನ್ನಲಾಗಿದೆ.