ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ನ ೨೦೨೪ ರ ಪ್ರಣಾಳಿಕೆಯನ್ನು ಓದಿರುವುದು ನನಗೆ ಖುಷಿ ತಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಮಂಗಳವಾರ ಕೇಂದ್ರ ಬಜೆಟ್ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿದಂಬರಂ, ಕಾಂಗ್ರೆಸ್ ಪ್ರಣಾಳಿಕೆಯ ಪುಟ ೩೦ ರಲ್ಲಿ ವಿವರಿಸಿರುವ ಉದ್ಯೋಗಕ್ಕೆ ಉತ್ತೇಜನ ನೀಡುವ ವಿಚಾರವನ್ನು ಬಜೆಟ್ನಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ನನಗೆ ಸಂತೋಷ ನೀಡಿದೆ. ಅದರ ಜತೆಗೆ ಕಾಂಗ್ರೆಸ್ ಪ್ರಣಾಳಿಕೆಯ ಪುಟ ೧೧ ರಲ್ಲಿ ನಮೂದಿಸಿರುವ ಅಪ್ರೆಂಟಿಸ್ ಗೆ ಭತ್ಯೆಯೊಂದಿಗೆ ಅಪ್ರೆಂಟಿಸ್ ಶಿಪ್ ಯೋಜನೆಯನ್ನು ಪರಿಚಯಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಇತರ ಕೆಲವು ವಿಚಾರಗಳನ್ನು ಸಚಿವರು ಆಯವ್ಯಯದಲ್ಲಿ ನಕಲು ಮಾಡಿದ್ದಾರೆ. ತಪ್ಪಿದ ಅಂಶಗಳನ್ನು ನಾನು ಶೀಘ್ರದಲ್ಲೇ ಪಟ್ಟಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.