ಮೈಸೂರು: ಸುಧೀರ್ಘ ಹಾಗೂ ಭವಿಷ್ಯದ ಗುರಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಅದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ಸಾಕ್ಷಿಯಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ೭ರಿಂದ ೧೦ ಲಕ್ಷ ಆದಾಯ ಹೊಂದಿರುವವರಿಗೆ ಶೇ.೧೦ರಷ್ಟು ತೆರಿಗೆ ವಿಧಿಸಲಾಗಿದೆ. ಹಣಕಾಸು ಸಚಿವರ ಪ್ರಕಾರ, ಹೊಸ ಘೋಷಣೆಗಳಿಂದ ನಾಲ್ಕು ಕೋಟಿ ಜನರು ಹೊಸ ತೆರಿಗೆ ವ್ಯವಸ್ಥೆಯಲ್ಲಿ ೧೭,೫೦೦ ರೂ.ವರೆಗೆ ಪ್ರಯೋಜನ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಈ ಆದಾಯ ವ್ಯಾಪ್ತಿಯಲ್ಲಿ ಮಧ್ಯಮ ವರ್ಗದ ಮಂದಿಯೇ ಬಹುಪಾಲು ಇರುವುದರಿಂದ ಆ ವರ್ಗದ ಮೇಲೆ ಹೆಚ್ಚಿನ ಹೊರೆ ಉಂಟಾಗಿದೆ ಎಂದಿದ್ದಾರೆ.
ಉಚಿತ ಸೌರ ವಿದ್ಯುತ್ ಯೋಜನೆಯ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದು, ೧ ಕೋಟಿ ಕುಟುಂಬಗಳು ಪ್ರತಿ ತಿಂಗಳು ೩೦೦ ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಅನುವು ಮಾಡಿಕೊಡಲು ಸೋಲಾರ್ ಫಲಕಗಳನ್ನು ಸ್ಥಾಪಿಸಲು ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಕರ್ನಾಟಕ ರಾಜ್ಯ ಸರ್ಕಾರ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಕೇಂದ್ರದ ಈ ಯೋಜನೆ ಜನರ ದಿಕ್ಕು ಬದಲಿಸುವ ಹುನ್ನಾರವಾಗಿದೆ.
ರಾಜ್ಯ ಸಭಾ ಸದಸ್ಯರಾಗಿ ನಂತರ ಸಚಿವೆ ಸ್ಥಾನ ಅಲಂಕರಿಸಿರುವ ನಿರ್ಮಲಾ ಸೀತಾರಾಮನ್ ಅವರ ಆಯವ್ಯಯದಲ್ಲಿ ಆಂದ್ರಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ವಂಚನೆ ಎಸಲಾಗಿದೆ.
ಯುವಕರು ಉದ್ಯೋಗ ಮಾರ್ಕೆಟ್ ಗೆ ಪ್ರವೇಶಿಸಲು ಉತ್ತೇಜಿಸುವ ನಿಟ್ಟಿನಲ್ಲಿ 30 ಲಕ್ಷ ಯುವಕರಿಗೆ Incentives ರೂಪದಲ್ಲಿ ಒಂದು ತಿಂಗಳ ಪಿಎಫ್ (Provident Fund) ಅನ್ನು ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದೆ. ದುರ್ದೈವೆಂದರೆ ಕೇಂದ್ರದ ಬಹುತೇಕ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ದಕ್ಕಿಲ್ಲದಿರುವುದನ್ನು ದಾಖಲೆಗಳು ಹೇಳುತ್ತಿವೆ.
ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ೧.೫೨ ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ. ಆದರೆ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಕೃಷಿಕರ ಹಿತ ಕಾಯುವ ಕೆಲಸವನ್ನೂ ಮಾಡಿಲ್ಲ. ಮಾತ್ರವಲ್ಲ, ರಾಜ್ಯ ಸರ್ಕಾರದ ಜಿಎಸ್ಟಿ ಪಾಲಿನ ಹಣ ನೀಡಲು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಈ ಎಲ್ಲಾ ಅಂಶಗಳು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರದ ನೀತಿಯನ್ನು ಬಟಾಬಯಲು ಮಾಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.