ಚನ್ನಪಟ್ಟಣ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಮಿತಿಯ ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಯ ಜಾರಿಯಿಂದ ಎದುರಾಗಿರುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಪರಿಶಿಷ್ಟ, ಶೋಷಿತ ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಿರುವ ಎಸ್.ಸಿ.ಎಸ್.ಪಿ ಟಿಎಸ್.ಪಿ ಯೋಜನೆಯ ಹಣವನ್ನು ಬಳಸಿಕೊಳ್ಳುತ್ತಿದೆ ಎಂದರು.
ಅಲ್ಲದೇ, ಎಸ್ಎಸ್ಎಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಸಹ ನಿಲ್ಲಿಸಿರುವುದು ಖಂಡನೀಯ ಎಂದರು.
ಸಮಿತಿಯ ಪದಾಧಿಕಾರಿ ಅರುಣ್ ರಾಂಪುರ ಮಾತನಾಡಿ, ‘ಗ್ಯಾರಂಟಿ ಯೋಜನೆಗೆ ರೂ. 52 ಸಾವಿರ ಕೋಟಿ ಮೀಸಲಿರಿಸಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣಕ್ಕೆ ಕೈ ಹಾಕಿರುವುದು ವಿಪರ್ಯಾಸ ಎಂದರು.
ರಾಜ್ಯಸರ್ಕಾರದ ದಲಿತ ವಿರೋಧಿ ಧೋರಣೆ ವಿರುದ್ಧ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನಂತರ ತಹಶೀಲ್ದಾರ್ ನರಸಿಂಹಮೂರ್ತಿಗೆ ಮನವಿಪತ್ರ ನೀಡಿದರು.
ಸಮಿತಿಯ ಪದಾಧಿಕಾರಿಗಳಾದ ಗ.ಚಂದ್ರಶೇಖರ್, ಕೊಡಂಬಹಳ್ಳಿ ಹನುಮಂತು, ಶಿವು, ಬ್ಯಾಡರಹಳ್ಳಿ ಶಿವಕುಮಾರ್, ಹೊಂಗನೂರು ಶಿವು, ಬಿ.ವಿ.ಎಸ್. ಕುಮಾರ್, ಶಿವಾನಂದ್, ವಸಂತ್ ಕುಮಾರ್, ಸ್ವಾಮಿ ಮೆಣಸಿಗನಹಳ್ಳಿ, ಭರತ್ ಕುಮಾರ್, ಶಿವ ಬಸವಯ್ಯ, ನುಣ್ಣರು ಸತೀಶ್, ರಘು ನೀಲಸಂದ್ರ, ಪ್ರದೀಪ್ ಅಪ್ಪಗೆರೆ, ಶ್ರೀನಿವಾಸ್ ಅಪ್ಪಗೆರೆ, ಇತರರು ಭಾಗವಹಿಸಿದ್ದರು.