Saturday, April 19, 2025
Google search engine

Homeರಾಜ್ಯಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಅಕ್ರಮದಲ್ಲಿ ನನ್ನ ಪಾತ್ರವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಅಕ್ರಮದಲ್ಲಿ ನನ್ನ ಪಾತ್ರವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ನಿವೇಶನ ಅಕ್ರಮದಲ್ಲಿ ನನ್ನ ಪಾತ್ರವೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಪರಿಷತ್‌ನಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ.

ಮುಡಾ ಅಕ್ರಮದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌‍ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯನವರು, ಪ್ರತಿಪಕ್ಷದ ಸದಸ್ಯರು ಎತ್ತಿರುವ ವಿಷಯದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಪುನರುಚ್ಚರಿಸಿದರು.

ನಾವು ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡುವಂತೆ ಮುಡಾದವರಿಗೆ ಅರ್ಜಿ ಕೊಟ್ಟಿದ್ದೆವು. ಶೇ. 50-50ರ ಅನುಪಾತದಲ್ಲಿ ಕಾನೂನಿನಡಿಯೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ನಿಯಮಾನುಸುರವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ತಪ್ಪಿನ ಪ್ರಶ್ನೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.

ಮುಡಾದವರು ನಿಯಮಾನುಸಾರ ನಿವೇಶನ ಹಂಚಿಕೆ ಮಾಡುತ್ತಾರೆ. 38 ಚದರ ಅಡಿಯಲ್ಲಿ ಸ್ವತಃ ನಮದೇ ಭೂಮಿ ಹೋಗಿದೆ. ನಾನು 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಅಕ್ರಮ ನಡೆದಿಲ್ಲ ಎಂದು ಹೇಳಿದ್ದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಇಂತಹ ಕಡೆಯೇ ನಿರ್ಧಿಷ್ಟ ಸ್ಥಳದಲ್ಲಿ ನಿವೇಶನ ಕೊಡಿ ಎಂದು ಕೇಳಿದ್ದರೆ ಅದು ನಿಯಮ ಬಾಹಿರವಾಗುತ್ತಿತ್ತು. ಮುಡಾದವರೇ ನಿವೇಶನ ಹಂಚಿಕೆ ಮಾಡಿರುವಾಗ ನಾವೇನು ಮಧ್ಯಪ್ರವೇಶ ಮಾಡಿದ್ದೇವಾ? ಎಂದು ಪ್ರತಿಪಕ್ಷದ ಸದಸ್ಯರದ ವಿರುದ್ಧ ಹರಿಹಾಯ್ದರು. ನಿಮ್ಮ ಉದ್ದೇಶ ಏನೆಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದೆ ಎಂದು ನಿಮಗೆ ಹೊಟ್ಟೆ ಉರಿ. 40 ವರ್ಷ ಸಾರ್ವಜನಿಕ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆ ಎಂಬ ಕಾರಣಕ್ಕಾಗಿ ನಿಮಗೆ ಹೊಟ್ಟೆ ಉರಿ. ನನ್ನ ಮುಖಕ್ಕೆ ಮಸಿ ಬಳಿಯುವ ನಿಮ ಪ್ರಯತ್ನ ಈಡೇರುವುದಿಲ್ಲ ಎಂದು ಸಿಡಿಮಿಡಿಗೊಂಡರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ನಿಷ್ಪಕ್ಷಪಾತವಾಗಿ ತನಿಖೆ ವರದಿ ಬರಲಿದೆ ಎಂದರು.

ಮುಡಾ ಅಧ್ಯಕ್ಷರಾಗಿದ್ದ ರಾಜೀವ್‌ ಅವರೇ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಬಿಜೆಪಿ ಕಾಲದಲ್ಲೇ ಇದು ನಡೆದಿರುವುದು. ಈಗ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಅಧಿವೇಶನದ ಕಲಾಪ ನಡೆಯಬಾರದೆಂಬುದು ಪ್ರತಿಪಕ್ಷಗಳ ಹುನ್ನಾರ

ಉದ್ದೇಶಪೂರ್ವಕವಾಗಿ ಪದೇ ಪದೇ ಒಂದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಈಗಾಗಲೇ ಸಭಾಪತಿಯವರು ನಿಮ್ಮ ನಿಲುವಳಿ ಸೂಚನೆ ಪ್ರಸ್ತಾವನೆಯನ್ನು ತಿರಸ್ಕಾರಿಸಿದ್ದೇವೆ ಎಂದು ರೂಲಿಂಗ್‌ ಕೊಟ್ಟಿದ್ದಾರೆ. ಆದರೂ ಅದೇ ವಿಷಯವನ್ನು ಚರ್ಚೆಗೆ ಕೊಡಬೇಕೆಂದು ಪಟ್ಟು ಹಿಡಿಯುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ನೀವು ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ. ನಿಮ್ಮ ಮೇಲೆ ನಮಗೆ ಯಾವುದೇ ದ್ವೇಷವಿಲ್ಲ. ಮುಡಾದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ನಾವು ಚರ್ಚೆಗೆ ಕೇಳುತ್ತಿದ್ದೇವೆ. ಇದು ತಪ್ಪೇ ಎಂದು ಪ್ರಶ್ನೆ ಮಾಡಿದರು.

ಇದು ಸಾವಿರಾರು ಕೋಟಿಗಳ ವಿಷಯ. ಸ್ವತಃ ಮುಖ್ಯಮಂತ್ರಿಗಳ ಕುಟುಂಬದವರೇ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಇಂತಹ ಮಹತ್ವದ ವಿಷಯವನ್ನು ಚರ್ಚೆ ಮಾಡಲೇಬಾರದೆಂದರೆ ಹೇಗೆ ಎಂದು ಮರು ಪ್ರಶ್ನೆ ಹಾಕಿದರು.

ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯನವರ ಪರವಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ ಪರವಾಗಿ ನಿಂತರು.
ಈ ಸಂದರ್ಭದಲ್ಲಿ ಬಿಜೆಪಿಯ ಸದಸ್ಯ ಸಿ.ಟಿ.ರವಿ ಅವರು, ಸಮಾಜವಾದಿ ಎನ್ನುತ್ತಾರೆ. ಮಜವಾದ ಮಾಡುತ್ತಾರೆ. ದಲಿತರ ಪರ ಎನ್ನುತ್ತಾರೆ. ಅವರ ಜಮೀನನ್ನೇ ಕಬಳಿಸುತ್ತಾರೆ. ದಲಿತರ ಅಭಿವೃದ್ಧಿ ಎನ್ನುತ್ತಾರೆ, ಅವರ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.

187 ಕೋಟಿ ಮಹರ್ಷಿ ವಾಲೀಕಿ ನಿಗಮದ ದುಡ್ಡು ತೆಲಂಗಾಣಕ್ಕೆ ಹೋಯ್ತು. ಹೇಳುವುದು ಸಮಾಜವಾದ, ಮಾಡುವುದು ಮಜಾವಾದ. ದಲಿತರ ಸೈಟ್‌ ತಿಂದಿರುವ ಸಿದ್ದರಾಮಯ್ಯನವರಿಗೆ ಧಿಕ್ಕಾರ ಎಂದು ತರಾಟೆಗೆ ತೆಗೆದುಕೊಂಡರು.

ಗದ್ದಲದ ನಡುವೆಯೇ ಸಚಿವರು ಕೆಲವು ಕಾಯ್ದೆಗಳನ್ನು ಮಂಡಿಸಲು ಮುಂದಾದಾಗ ಗೋವಿಂದ ಗೋವಿಂದ ಎಂದು ಹಾಡುಗಳ ಮೂಲಕ ಆಡಳಿತ ಪಕ್ಷವನ್ನು ವಿರೋಧ ಪಕ್ಷದ ಸದಸ್ಯರು ಕಿಚಾಯಿಸಿದರು. ಆಗ ಆಡಳಿತ ಪಕ್ಷದವರು ಯಡಿಯೂರಪ್ಪ, ಕುಮಾರಸ್ವಾಮಿ, ಜಗದೀಶ್‌ ಶೆಟ್ಟರ್‌ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.

RELATED ARTICLES
- Advertisment -
Google search engine

Most Popular