Sunday, April 20, 2025
Google search engine

Homeರಾಜ್ಯಮೂಡಾ ಹಗರಣಗಳ ತನಿಖೆ ಪ್ರಾರಂಭ: ೨೦೦೬ ರಿಂದ ೨೦೨೪ರ ತನಕ ನಡೆದಿರುವ ಅಕ್ರಮಗಳ ವರದಿ ನೀಡುವಂತೆ...

ಮೂಡಾ ಹಗರಣಗಳ ತನಿಖೆ ಪ್ರಾರಂಭ: ೨೦೦೬ ರಿಂದ ೨೦೨೪ರ ತನಕ ನಡೆದಿರುವ ಅಕ್ರಮಗಳ ವರದಿ ನೀಡುವಂತೆ ಆದೇಶ

ಬೆಂಗಳೂರು: ಮೂಡಾದಲ್ಲಿ ೨೦೦೬ರಿಂದ ೨೦೨೪ರ ಜುಲೈ ೧೫ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತು ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಆಯೋಗ ವಿಚಾರಣೆ ನಡೆಸಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ (ಎರಡು ಅವಧಿ), ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ (ಎರಡು ಅವಧಿ) ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾಧಿಕಾರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ಕಾರಣದಿಂದ ವಿಚಾರಣಾ ಆಯೋಗ ನೇಮಿಸಿ ಜುಲೈ ೧೪ರಂದು ಆದೇಶ ಹೊರಡಿಸಲಾಗಿತ್ತು. ಆಯೋಗದ ಕಾರ್ಯವ್ಯಾಪ್ತಿ ಮತ್ತು ಷರತ್ತುಗಳನ್ನು ಸ್ಪಷ್ಟಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ. ೨೦೦೬ರಿಂದ ೨೦೨೪ರ ಜುಲೈ ೧೫ರವರೆಗೆ ಮುಡಾ ನಿರ್ಮಿಸಿರುವ ಬಡಾವಣೆಗಳು, ಭೂಸ್ವಾಧೀನ, ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನುಗಳನ್ನು ಕೈಬಿಟ್ಟಿರುವುದು, ಅಂತಹ ಜಮೀನುಗಳನ್ನು ಪುನಃ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಂಡಿರುವುದು, ಭೂಸ್ವಾಧೀನ ಪ್ರಕ್ರಿಯೆ ನಡೆಸದೇ ಖಾಸಗಿ ಜಮೀನುಗಳನ್ನು ಬಳಸಿಕೊಂಡಿರುವುದು, ಅಂತಹ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಿಸಲು ಅನುಸರಿಸಿರುವ ವಿಧಾನಗಳ ಕುರಿತು ವಿಚಾರಣೆ ನಡೆಸುವಂತೆ ತಿಳಿಸಲಾಗಿದೆ.

ನಿವೇಶನ ರೂಪದ ಪರಿಹಾರ ವಿತರಣೆಯಲ್ಲಿ ಕಾನೂನು ಪಾಲನೆ ಕುರಿತೂ ವಿಚಾರಣೆ ನಡೆಸಬೇಕು. ೧೯ ವರ್ಷಗಳ ಅವಧಿಯಲ್ಲಿ ಮುಡಾದಲ್ಲಿ ನಡೆದಿರಬಹುದಾದ ಎಲ್ಲ ಅಕ್ರಮಗಳನ್ನು ಗುರುತಿಸಿ, ಸೂಕ್ತ ಸಲಹೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ಆಯೋಗಕ್ಕೆ ಸೂಚಿಸಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆ ಇಲ್ಲದೆ ಮುಡಾ ವಶಕ್ಕೆ ಪಡೆದ ಜಮೀನುಗಳ ಮಾಲೀಕರಿಗೆ ಪರಿಹಾರ ನೀಡಲು ಪ್ರಾಧಿಕಾರ ಕೈಗೊಂಡ ನಿರ್ಣಯಗಳು ಕಾನೂನಿನ ಪ್ರಕಾರ ಸಿಂಧುವಾಗುತ್ತವೆಯೆ? ಅಥವಾ ಇಲ್ಲವೆ ಎಂಬುದನ್ನೂ ಪರಿಶೀಲಿಸುವ ಹೊಣೆಯನ್ನು ಆಯೋಗಕ್ಕೆ ನೀಡಲಾಗಿದೆ. ನಾಗರಿಕ ಸೌಲಭ್ಯಕ್ಕೆ (ಸಿ.ಎ) ಮೀಸಲಾದ ನಿವೇಶನಗಳ ಹಂಚಿಕೆ ಬಗ್ಗೆಯೂ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular