Monday, April 21, 2025
Google search engine

Homeರಾಜ್ಯಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿಗೆ ಅರ್ಜಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿಗೆ ಅರ್ಜಿ

ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಡೆಸಿದ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ.ಜೆ ಅಬ್ರಾಹಂ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜು.೧೮ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಅಬ್ರಾಹಂ, ಕಾನೂನು ಪ್ರಕಾರ ರಾಜ್ಯಪಾಲರ ಅನುಮತಿ ಪಡೆಯಲು ಇದೀಗ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೂರ್ವಭಾವಿಯಾಗಿ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ೨೨ ಪುಟಗಳ ಮನವಿ ಪತ್ರವನ್ನು ಅಬ್ರಾಹಂ ಸಲ್ಲಿಸಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ನಿವೇಶನ ಅಕ್ರಮ ಎಸಗಿದ್ದಾರೆ. ಆ ಮೂಲಕ ರಾಜ್ಯದ ಬೊಕ್ಕಸಕ್ಕೆ ೫೫.೮೦ ಕೋಟಿ ರೂಪಾಯಿನಷ್ಟು ನಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಹೆಚ್ಚಿನ ವಿಚಾರಣೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ಪ್ರಕರಣ ದಾಖಲಿಸಬೇಕಿದೆ. ಅದಕ್ಕೆ ತಮ್ಮ ಅನುಮತಿ ಅಗತ್ಯವಿದೆ ಎಂದು ಮನವಿಯಲ್ಲಿ ಕೋರಲಾಗಿದೆ.

ಮೈಸೂರಿನ ಕೆಸರೆ ಗ್ರಾಮದ ೩.೧೬ ಎಕರೆ ಜಮೀನನ್ನು ಡಿ ನೋಟಿಫೈ ಮಾಡಿ ವಂಚನೆ ಮೂಲಕ ಕಬಳಿಸಲಾಗಿದೆ. ತಮ್ಮ ಹೆಸರಿನಲ್ಲಿ ಇಲ್ಲದಿದ್ದರೂ, ಅದರ ಮೇಲೆ ಯಾವ ರೀತಿಯಲ್ಲೂ ತಮಗೆ ಹಕ್ಕು ಇಲ್ಲದೇ ಹೋದರೂ ಜೆ ದೇವರಾಜ ಅವರು ಆ ಜಮೀನನ್ನು ಮಾರಾಟ ಮಾಡಿದ್ದಾರೆ. ಆ ಜಮೀನನ್ನು ಸಿದ್ದರಾಮಯ್ಯ ಅವರ ಬಾವಮೈದ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಸೂಚನೆ ಮೇರೆಗೇ ಈ ವ್ಯವಹಾರ ನಡೆದಿದೆ. ಹಾಗಾಗಿ ಸಿಎಂ ಈ ವ್ಯವಹಾರದಲ್ಲಿ ನೇರವಾಗಿ ಪಾಲುದಾರರು. ಆದ್ದರಿಂದ ಅವರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಿ ಪ್ರಕರಣದ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಅಬ್ರಾಹಂ ತಮ್ಮ ಮನವಿಯಲ್ಲಿ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular