ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಹಗರಣದ ಪ್ರಧಾನ ಆರೋಪಿ ಸತ್ಯನಾರಾಯಣ ವರ್ಮಾನ ಮನೆಯಿಂದ ಬರೋಬ್ಬರಿ ೧೦ ಕೆ.ಜಿ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿದೆ.
ಆರೋಪಿ ಸತ್ಯನಾರಾಯಣ್ ವರ್ಮಾ ವಾಲ್ಮೀಕಿ ಹಗರಣದ ಹಣದಲ್ಲೇ ಈ ಚಿನ್ನ ಖರೀದಿಸಿದ್ದ. ಎಸ್‌ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದಾಗ ೧೫ ಕೆ.ಜಿ.ಗೋಲ್ಡ್ ಕೊಡುವುದಾಗಿ ಹೇಳಿದ್ದ. ಅದರಂತೆ ತನ್ನ ಹೈದರಾಬಾದ್ ಪ್ಲಾಟ್ ನಲ್ಲಿ ೧೦ ಕೆ.ಜಿ.ಚಿನ್ನದ ಗಟ್ಟಿ ಇಟ್ಟಿರುವುದನ್ನು ತೋರಿಸಿದ್ದಾನೆ. ಉಳಿದ ಚಿನ್ನದ ಬಿಸ್ಕೆಟ್ ಗಾಗಿ ಎಸ್‌ಐಟಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ವರ್ಮಾ ಇದುವರೆಗೂ ವಾಲ್ಮೀಕಿ ಹಗರಣದ ಹಣದಿಂದ ಬರೋಬ್ಬರಿ ೩೫ ಕೆ.ಜಿ.ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದಾನೆ ಎನ್ನಲಾಗಿದೆ.
ಹೈದರಾಬಾದ್ ಸೀಮಾ ಪೇಟೆ, ಮೀಯಾ ಪುರದಲ್ಲಿ ವಾಸವಿ ಬಿಲ್ಡರ್ಸ್‌ನಲ್ಲಿ ತಲಾ ಎರಡು ಫ್ಲಾಟ್ ಸೇರಿ ಒಟ್ಟು ೧೧ ಫ್ಲಾಟ್ ಖರೀದಿಸಿರುವ ಬಗ್ಗೆ ಎಸ್‌ಐಟಿಗೆ ಮಾಹಿತಿ ಸಿಕ್ಕಿದೆ. ಹೈದರಾಬಾದ್ ಫ್ಲಾಟ್‌ನಲ್ಲಿ ೮ ಕೋಟಿ ಹಣ ಅಡಗಿಸಿಟ್ಟಿದ್ದು ಬ್ಯಾಗ್ ನಲ್ಲಿ ೮ ಕೋಟಿ ನಗದು ಸಿಕ್ಕಿದೆ. ಹಣ ಎಣಿಕೆ ಮಿಷನ್ ತರಿಸಿ ಹಣ ಎಣಿಕೆ ಮಾಡಿ ಜಪ್ತಿ ಮಾಡಲಾಗಿದೆ.
ಮಾರ್ಚ್ ೨೦೨೪ ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಜಿ ರೋಡ್ ಶಾಖೆಯಲ್ಲಿರುವ ನಿಗಮದ ಬ್ಯಾಂಕ್ ಖಾತೆಯಿಂದ ಅದೇ ಬ್ಯಾಂಕ್‌ನ ಇತರ ಶಾಖೆಗಳಿಗೆ ಹಣ ವರ್ಗಾವಣೆ ಮಾಡಿದ್ದು, ೮೯.೬೨ ಕೋಟಿ ರೂ.ಗಳನ್ನು ವಿವಿಧ ಐಟಿ ಕಂಪನಿಗಳಿಗೆ ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿತ್ತು. ಹಗರಣದ ಕುರಿತು ಸದ್ಯ ರಾಜ್ಯ ಸರ್ಕಾರದ ಎಸ್‌ಐಟಿ, ಕೇಂದ್ರದ ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿವೆ.