Saturday, April 19, 2025
Google search engine

Homeಸ್ಥಳೀಯಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದ ಡಾ.ಹೆಚ್.ಸಿ.ಮಹದೇವಪ್ಪ

ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ಜಲದರ್ಶನಿ ಅತಿಥಿಗೃಹದಲ್ಲಿ ಇಂದು ಮೈಸೂರು ಹಾಗೂ ಚಾಮರಾಜನಗರ ಭಾಗದ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದರಂತೆ ಕಬ್ಬುಬೆಳೆಗಾರರ ಹಿತದೃಷ್ಟಿಯಿಂದ ಸಭೆಯಲ್ಲಿ ತಿಳಿಸಿರುವ ಬೇಡಿಕೆಗಳಿಗೆ ಸರ್ಕಾರವು ಪ್ರಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು ಮಾತನಾಡಿ, ಸರ್ಕಾರ ಹಾಗೂ ಸಂಸ್ಥೆ ನಡುವ ಒಡಂಬಡಿಕೆಯಾಗಿರುವುದು ಕಾರ್ಖಾನೆ ಪ್ರಾರಂಭಿಸಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುವುದಾಗಿದೆ. ಕಾರ್ಖಾನೆ ಪ್ರಾರಂಭಿಸದ ಬಗ್ಗೆ ಸಂಬಂಧಿಸಿದವರೊಟ್ಟಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ರೈತರ ಜಮೀನಿಗೆ ನೀರು ತಲುಪಿಸಲು ನೀರಾವರಿ ಯೋಜನೆ ರೂಪಿಸಲಾಗಿದೆ. ಈ ನಡುವೆ ನಾಲೆಗಳಿಂದ ಮೋಟಾರ್ ಮೂಲಕ ನೀರು ಪಡೆಯುವವರ ಮೇಲೆ ಕ್ರಮ ಜರುಗಿಸಲಾಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಇದರ ಮಾರ್ಪಾಡಿಗೆ ರೈತರು ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದರು.

ಬ್ಯಾಂಕುಗಳಲ್ಲಿ ರೈತರಿಗೆ ಅಸಹಕಾರ ನೀಡುತ್ತಿದ್ದಾರೆ ಎಂಬ ರೈತರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಬ್ಯಾಂಕ್ ಅಧಿಕಾರಿಗಳನ್ನು ಸಭೆಕರೆದು ಚರ್ಚಿಸಿ ರೈತರನ್ನು ಶೋಷಣೆ ಮಾಡದಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ರೈತರು ತಾವು ಬೆಳೆದ ಬೆಳೆ ಸಾಗಿಸಲು ಅನುಕೂಲವಾಗುವ ‘ನಮ್ಮ ಹೊಲ, ನಮ್ಮ ರಸ್ತೆಯನ್ನು’ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜನರು ಕೂಡ ಪ್ರಜಾಪ್ರಭುತ್ವದ ಪ್ರಮುಖ ವೇದಿಕೆಯಾದ ಗ್ರಾಮಸಭೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಅಧೀಕ್ಷರಾದ ಸೀಮಾ ಲಾಟ್ಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರೈತಸಂಘದ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular