ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಮತ್ತು ಉತ್ತಮ ಸ್ಥಾನಕ್ಕೆ ಸೇರಿದವರು ತಾವು ಓದಿದ ಶಾಲೆಗೆ ನೆರವು ನೀಡಬೇಕು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಹೇಳಿದರು. ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ನಡೆದ ಗುರುವಂದನ ಮತ್ತು ಸ್ನೇಹ ಬಂಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾನು ಈ ಶಾಲೆಯಲ್ಲಿ ಓದಿದ್ದು ಹೆಮ್ಮೆ ಎನಿಸುತ್ತಿದೆ ಎಂದರು.
ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಂಡಿದ್ದು ಜೀವನಕ್ಕೆ ಆಸರೆಯಾಗಿರುವ ಶಾಲೆಯ ಋಣವನ್ನು ಪ್ರತಿಯೊಬ್ಬರು ತೀರಿಸಲು ಮುಂದಾಗಬೇಕೆಂದು ಕರೆ ನೀಡಿದರು. ಗುರುಗಳ ಆಶೀರ್ವಾದ ದೊರೆತರೆ ಸಮಾಜದಲ್ಲಿ ಸರ್ವ ವನ್ನು ಸಾಧಿಸಲು ಸಾಧ್ಯವಾಗಲಿದ್ದು ನಮ್ಮ ಶಾಲೆಯಲ್ಲಿ ಓದಿರುವ ನೂರಾರು ಮಂದಿ ವಿದೇಶದಲ್ಲೂ ಇದ್ದು ಇದು ನಮಗೆ ಸಂತಸದ ವಿಚಾರ ಎಂದರಲ್ಲದೆ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ಗುರುಕುಲ ಸಂಸ್ಕೃತಿಗೆ ಬುನಾದಿ ಹಾಕಿ ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಜ್ಞಾನದಾಹಿಗಳಿಗೆ ಆಶ್ರಯ ನೀಡಿದ ಆದಿಚುಂಚನಗಿರಿ ಶಾಖಾ ಮಠ ಮತ್ತು ಅನಾಥಾಶ್ರಮ ಇಲ್ಲಿ ಇರುವುದು ನಮ್ಮ ಪುಣ್ಯ ವಿಶೇಷ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ೬೦ ವರ್ಷಗಳ ಹಿಂದೆ ನಾನು ಈ ಶಾಲೆಯ ವಿದ್ಯಾರ್ಥಿಯಾಗಿ ನನ್ನ ಸಹಪಾಠಿಗಳೊಂದಿಗೆ ಕಲಿತ ನೆನಪು ಈಗಲೂ ಹಚ್ಚ ಹಸಿರಾಗಿದ್ದು ನಮಗೆ ವಿದ್ಯೆ ಕಲಿಸಿದ ಗುರುಗಳು ಮತ್ತು ಅವರ ಕುಟುಂಬಕ್ಕೆ ಭಗವಂತನ ಆಶೀರ್ವಾದ ಸದಾ ಇರಬೇಕೆಂದು ಹಾರೈಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಸಿ. ಪುಟ್ಟಸಿದ್ದಶೆಟ್ಟಿ ಮಾತನಾಡಿ ಅಂಧಕಾರದಲ್ಲಿ ಇರುವ ನಮ್ಮ ಬದುಕನ್ನು ಜ್ಞಾನದ ಕಡೆಗೆ ನಡೆಸಿ ಜೀವನ ಕಟ್ಟಿಕೊಳ್ಳಲು ನೆರವಾಗುವ ಗುರುಗಳು ಎಲ್ಲರಿಗೂ ನಿಜವಾದ ದೇವರು ಎಂದರು.

ಶಿಕ್ಷಕರು ಗುರುಗಳ ಸ್ಥಾನ ಅಲಂಕರಿಸಬೇಕಾದರೆ ಆಧ್ಯಾತ್ಮ ಶಕ್ತಿಯನ್ನು ಮೈಗೂಡಿಸಿಕೊಂಡು ಆ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನದ ದಾಹ ನೀಗುವಂತೆ ಮಾಡಿ ಅವರ ಬದುಕು ಹಸನಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಪ್ರೌಢಶಾಲಾ ನಿವೃತ್ತ ಶಿಕ್ಷಕರು, ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ವೃಂದದವರು, ಬೋಧಕೇತರ ವರ್ಗದವರು, ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾಧಕರು, ಜೀವಿತ ವಯೋವೃದ್ಧ ಸದಸ್ಯರು ಮತ್ತು ಯುಪಿಎಸ್‌ಪಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸಣ್ಣನಾಯಕ, ಮೇಲೂರುಪರಶುರಾಮ್, ಚನ್ನಕೇಶವ, ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಬಿ.ಪ್ರಕಾಶ್, ವಿ.ಎಚ್.ಗೌಡಪ್ಪ, ಡಾ.ಎಸ್.ಎಸ್.ಪ್ರಕಾಶ್, ಪ್ರೌಡಶಾಲಾ ಮುಖ್ಯ ಶಿಕ್ಷಕ ಕೆ.ಸಿ.ಮಧು, ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ಕುಮಾರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಇಓ ಕೃಷ್ಣಪ್ಪ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ. ಹೆಚ್.ಜಯ ರಾಮೇಗೌಡ, ಉಪಾಧ್ಯಕ್ಷ ಎಸ್.ಎಸ್.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣೇಗೌಡ, ಸಹ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕೆ.ಎ.ಕೆಂಪರಾಜು, ಸಂಘಟನಾ ಕಾರ್ಯದರ್ಶಿ ವೈ.ಎ. ಮಹದೇವ್, ಸಂಚಾಲಕರಾದ ಸಿ.ಟಿ.ಧರ್ಮಪಾಲ, ಆರ್. ಟ್ಯಾಗೋರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೆ.ಎಸ್.ಲೋಕೇಶ್, ಪರಶುರಾಮ್ ನಿರ್ದೇಶಕರಾದ ಎಂ.ಟಿ.ಮಂಜುನಾಥ್, ಎಸ್.ಎಸ್.ಪ್ರಕಾಶ್, ಎಸ್.ಕೆ.ರಾಜು, ಎಸ್.ಟಿ.ಪುರುಷೋತ್ತಮ, ಅಶ್ವಥ್ ಕುಮಾರ್, ಪ್ರಸನ್ನಕುಮಾರ್, ವಿಜಯಕುಮಾರ್, ಕೆ.ಎಸ್.ವೆಂಕಟೇಶ್, ಭಾಗ್ಯಮ್ಮ, ಹೇಮಲತಾ, ಗೌರವ ಸಲಹೆಗಾರರಾದ ಡಿ.ಕೆ.ಸಣ್ಣ ನಾಯಕ, ಜಯರಾಮೇಗೌಡ, ನಿವೃತ್ತ ಶಿಕ್ಷಕರಾದ ಕುಪ್ಪೆ ಜವರೇಗೌಡ, ಎಂ.ಮಲ್ಲಿಕಾರ್ಜುನ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಧನಲಕ್ಷ್ಮೀಅನಂತರಾಮು, ನೂರ್ ಜಹಾನ್, ಮಂಜುಳವೇಣುಗೋಪಾಲ್, ಎಂ.ವಿ. ಸವಿತಾ, ಕಲಾ, ರಾಚಯ್ಯ, ಚೇತನ, ಸಿ.ಕೆ.ಪಂಜು ಸಿ.ಎಸ್.ಮಂಜುನಾಥ್ ವಿಠಲ, ಶೇಖರ, ಜಮೃತ್ ಖಾನ್, ರಮೇಶ್, ಕಾಂತರಾಜು, ಸಂತೋಷ್, ಪತ್ರಿಕಾ ಕಾರ್ಯದರ್ಶಿಗಳಾದ ಕುಪ್ಪೆ ಮಹದೇವಸ್ವಾಮಿ, ಸಿ.ಜಿ.ಮಧು ಸೇರಿದಂತೆ ನೂರಾರು ಮಂದಿ ಹಳೆಯ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.
ಹತ್ತಾರು ವರ್ಷಗಳ ನಂತರ ಪರಸ್ಪರ ಭೇಟಿ: ದಶಕಗಳ ಹಿಂದೆ ಒಂದೇ ಶಾಲೆಯಲ್ಲಿ ಓದಿ ಪರಸ್ಪರ ಸ್ನೇಹದಿಂದ ಬಾಲ್ಯ ಕಳೆದು ಬದುಕು ಕಟ್ಟಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಹತ್ತಾರು ವರ್ಷಗಳ ನಂತರ ಪರಸ್ಪರ ಭೇಟಿಯಾದ ಹಳೆಯ ವಿದ್ಯಾರ್ಥಿಗಳು ಸಂಭ್ರಮ ಹಂಚಿಕೊಂಡು ಶಾಲಾ ದಿನಗಳನ್ನು ನೆನೆದು ಪುಳಕಿತರಾದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಗುರುವಂದನಾ ಮತ್ತು ಸ್ನೇಹ ಬಂಧನ ಸಮಾರಂಭದಲ್ಲಿ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿನ ಬಾಲ್ಯದ ಕ್ಷಣಗಳು ಮತ್ತು ಬದುಕುತ್ತಿರುವ ಚಿತ್ರಣವನ್ನು ಒಬ್ಬರಿಗೊಬ್ಬರು ಹೇಳಿಕೊಂಡು ನಕ್ಕು ನಲಿದು ಸಂಭ್ರಮದಲ್ಲಿ ತೇಲಾಡಿದರು. ಶಾಲಾ ದಿನಗಳಲ್ಲಿ ತಾವು ಬದುಕಿನಲ್ಲಿ ಅನುಭವಿಸಿದ ಸಂಕಷ್ಟದ ದಿನಗಳು ಆನಂತರ ಬದುಕಿನ ಅನುಭವಿಸಿದ ಯಾತನೆಗಳು ನೋವು ನಲಿವು ಮತ್ತು ಸಾಂಸಾರಿಕ ಜೀವನದ ಕಥೆಗಳ ಜೊತೆಗೆ ತಮ್ಮ ಮಕ್ಕಳ ಬಗ್ಗೆ ಮಾತನಾಡಿ ಮನಸು ಹಗುರ ಮಾಡಿಕೊಂಡರು.
ಹತ್ತಾರು ವರ್ಷಗಳ ಹಿಂದೆ ತಮಗೆ ತರಗತಿಗಳಲ್ಲಿ ಪಾಠ ಮಾಡಿದ್ದ ಶಿಕ್ಷಕರ ಮುಂದೆ ನಿಂತು ಮನಸ್ಸಿನ ಭಾವನೆಗಳನ್ನು ಹಂಚಿಕೊಂಡರಲ್ಲದೆ ಅವರ ಕಾಲಿಗೆ ಎರಗಿ ಆಶೀರ್ವಾದ ಬೇಡಿ ಬಾವ ಪರವಶರಾದರು. ತಮ್ಮಿಂದ ವಿದ್ಯೆ ಕಲಿತ ನೂರಾರು ಮಂದಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸಾಧನೆ ಮಾಡಿ ತಾವೇ ಬೆರಗಾಗುವಂತೆ ಮಾಡಿದ್ದಕ್ಕೆ ಆನಂದ ತುಂಜಿಲರಾದ ಶಿಕ್ಷಕರುಗಳು ಎಲ್ಲರ ಜೀವನ ಶೈಲಿಯನ್ನು ಒಪ್ಪಿಕೊಂಡು ಆನಂತರ ಅಪ್ಪಿಕೊಂಡು ಹರಸಿ ಆಶೀರ್ವದಿಸಿದರು.