ಅರಣ್ಯ ಸಂಪತ್ತು ಹೆಚ್ಚಿಸುವ ಮೂಲಕ ಇಲಾಖೆಗೆ ಶಂಕರೇಗೌಡರೇ ಒಂದು ಸಂಪತ್ತು–ಜೆಪಿ ಶ್ಲಾಘನೆ
ಮಂಡ್ಯ: ಕೇವಲ ಅಧಿಕಾರಿಯಾಗಿರದೆ ತನ್ನ ವೃತ್ತಿಯ ಬಗ್ಗೆ ಅಪಾರ ಜ್ಞಾನ ಬೆಳೆಸಿಕೊಂಡು ತಾವು ಕೆಲಸ ಮಾಡಿದ ಕಡೆಯಲೆಲ್ಲಾ ಅರಣ್ಯ ಸಂಪತ್ತು ಹೆಚ್ಚಿಸಿದ, ರೈತರು ಮತ್ತು ಸಾಮಾನ್ಯ ಜನರಲ್ಲಿ ಪರಿಸರ ಹಾಗೂ ಆರೋಗ್ಯ ಕಾಳಜಿ ಮೂಡಿಸಿದ ಅಪಾರ ಜೀವನ ಪ್ರೀತಿಯ ಅಧಿಕಾರಿ ಶಂಕರೇಗೌಡ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅವರು ತಿಳಿಸಿದರು.
ಕರ್ನಾಟಕ ಸಂಘ, ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಹಾಗೂ ಶಂಕರಗೌಡ ಹಿತೈಷಿ ಬಳಗ ವತಿಯಿಂದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದೋನ್ನತಿ ಪಡೆದು ಮೈಸೂರು ಜಿಲ್ಲೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಶಂಕರೇಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ಪ್ರತಿಯೊಂದು ತಾಲ್ಲೂಕು, ಜಿಲ್ಲೆ ಅಪಾರ ಜೀವ ವೈವಿಧ್ಯತೆಯಿಂದ ಕೂಡಿದೆ. ಪ್ರಕೃತಿಯೊಂದಿಗಿನ ಪ್ರೀತಿ, ಗೌರವದ ಸಂಬoಧವೇ ಮನುಷ್ಯನ ಅಸ್ತಿತ್ವಕ್ಕೆ ಕಾರಣ. ಪ್ರಕೃತಿಯನ್ನು ಕಡೆಗಣಿಸಿ ಮನುಷ್ಯ ಬದುಕಲಾರ. ಈ ವಿಷಯವನ್ನು ಒಬ್ಬ ಅಧಿಕಾರಿಯಾಗಿ ಹೆಚ್ಚು ಮನಗಂಡಿರುವ ಶಂಕರೇಗೌಡ ಅವರು ಸಾಮಾಜಿಕ ಅರಣ್ಯ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ ಕಡೆಯಲ್ಲ ಬೋಳು ಪ್ರದೇಶವನ್ನು ಹಸಿರಾಗಿಸಿದ್ದಾರೆ. ಅರಣ್ಯ ಸಂಪತ್ತು ಹೆಚ್ಚಿಸುವ ಮೂಲಕ ಇಲಾಖೆಗೆ ಶಂಕರೇಗೌಡರೇ ಒಂದು ಸಂಪತ್ತಾಗಿದ್ದಾರೆ. ಅವರು ನನ್ನ ಶಿಷ್ಯ ಎಂದು ಹೇಳಿಕೊಳ್ಳುವುದೇ ಹೆಮ್ಮೆ ಎಂದು ಶ್ಲಾಘಿಸಿದರು.
ಓದು, ಸಾಮಾಜಿಕ ಕಳಕಳಿ ಇರುವ ಶಂಕರೇಗೌಡರು ಅಧೀನ ಅಧಿಕಾರಿಗಳ, ಸಿಬ್ಬಂದಿಯ, ಹಿರಿಯ ಅಧಿಕಾರಿಗಳ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ಅಪಾರ ಸ್ನೇಹ ಬಳಗವನ್ನೂ ಹೊಂದಿ ಮಾದರಿ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರಾದ ಸಿದ್ದರಾಮಯ್ಯ ಮಾತನಾಡಿ, ತಮ್ಮ ಇಲಾಖೆಯ ವಾಹನ ಚಾಲಕನ ಸಲಹೆಯನ್ನೂ ಸ್ವೀಕರಿಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಸಾಮಾಜಿಕ ಅರಣ್ಯೀಕರಣದಲ್ಲಿ ಯಶಸ್ಸು ಕಂಡಿರುವ ಅಪರೂಪದ ಅಧಿಕಾರಿ ಶಂಕರೇಗೌಡರು. ಒಬ್ಬ ಅಧಿಕಾರಿಗೆ ಇರುವಂತಹ ಅಮಲು, ಗತ್ತು ಇಲ್ಲದ ಸರಳ ವ್ಯಕ್ತಿಯಾಗಿ ಪದೋನ್ನತಿಯ ಸಂದರ್ಭದಲ್ಲೇ ಸಭಾಂಗಣ ತುಂಬಿ ತುಳುಕುವ ಹಾಗೆ ಅಭಿನಂದನೆ ಸ್ವೀಕರಿಸುತ್ತಿದ್ದಾರೆ ಎಂದರೆ ಅವರ ವ್ಯಕ್ತಿತ್ವ ವಿಶಿಷ್ಟವಾದುದ್ದು. ಸಮಾಜಕ್ಕೆ, ಇಲಾಖೆಗೆ ಮಂದೆಯೂ ಉತ್ತಮ ಸೇವೆ ದೊರೆಯಲಿ ಎಂದು ಆಶಿಸಿದರು.
ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಮಂಜು ಮುತ್ತೆಗೆರೆ ಮಾತನಾಡಿ, ಶಂಕರೇಗೌಡರ ಸಾಮಾಜಿಕ ಕಳಕಳಿಯ, ವೃತ್ತಿ ಬದ್ಧತೆಯ ಮೂರು ಸಂದರ್ಭಗಳನ್ನು ಉದಾಹರಿಸಿ ಅವರ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಟ್ಟರು. ಮಂಡ್ಯ ತಾಲ್ಲೂಕು ಮುದಗಂದೂರು ಹೊಸಹಳ್ಳಿಯ ಬೋಳು ಗುಡ್ಡದಲ್ಲಿ ನೂರಾರು ಮರಗಳು ಬೆಳೆದಿವೆ ಅದಕ್ಕೆ ಕಾರಣರು ಶಂಕರೇಗೌಡರು. ನನ್ನ ಆಸೆಯಂತೆ ನನ್ನೂರಿನ ರೈತರು ಶ್ರೀಗಂಧ ಬೆಳೆಯಲು ಪ್ರೇರೇಪಣೆ ನೀಡಿದರು. ಸಾವಿರಾರು ಸಸಿಗಳನ್ನು ನಾನು ವಿತರಿಸಿದೆ. ರೈತರ ಋಣಾತ್ಮಕ ಆಲೋಚನೆಗಳಿಂದ ಶ್ರೀಗಂಧ ಬೆಳೆಯಲ್ಲಿ ಯಶಸ್ಸು ಸಿಗಲಿಲ್ಲ. ಜತೆಗೆ ಬಂಡೀಪುರ ಅರಣ್ಯ ಅಂಚಿನಲ್ಲಿ ಪೀಡಕ ಹುಲಿ ನಿಯಂತ್ರಿಸಲು ಶ್ರಮಿಸಿದರು ಎಂದು ತಿಳಿಸಿದರು.
ಮಂಡ್ಯದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಅಭಿನಂದನೆ ಸಲ್ಲಿಸಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ರಾಜ್ಯ ಅರಣ್ಯ ಗುತ್ತಿಗೆದಾರರ ಸಂಘ ಉಪಾಧ್ಯಕ್ಷö ರಾಜೇಗೌಡ, ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಲಿ. ಅಧ್ಯಕ್ಷ ಕಾರಸವಾಡಿ ಮಹದೇವು, ಹಿರಿಯ ಪತ್ರರ್ಕರಾದ ಚಂದ್ರಶೇಖರ ದ.ಕೋ.ಹಳ್ಳಿ, ಶಂಭುಲಿoಗೇಗೌಡ ಕೆ. ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ, ನಿವೃತ್ತ ಶಿಕ್ಷಕ ಗೊರವಾಲೆ ಜಯಶಂಕರ್ ಅವರು ವೇದಿಕೆಯಲ್ಲಿದ್ದ ಗಣ್ಯರಿಗೆ ಬಟ್ಟೆ ಬ್ಯಾಗ್ ವಿತರಿಸಿ ಪರಿಸರ ಮಾರಕ ಪ್ಲಾಸ್ಟಿಕ್ ಬ್ಯಾಗು ತ್ಯಜಿಸೋಣ ಎಂದು ಮನವಿ ಮಾಡಿದರು.
ರಂಗ ಕಲಾವಿದ ಕಾರಸವಾಡಿ ಸುರೇಶ್, ಜಾನಪದ ಕಲಾವಿದ ಗೊರವಾಲೆ ಚಂದ್ರಶೇಖರ್, ಶೇಖರ್ ಗೀತೆಗಳನ್ನು ಹಾಡಿದರು. ಶಂಕರೇಗೌಡರ ಇಲಾಖೆ ಸಿಬ್ಬಂದಿ, ಸ್ನೇಹಿತರು, ಬಂಧುಗಳು ಹಾರ, ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು.