Sunday, April 20, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ನದಿಗೆ ಹೆಚ್ಚಿನ ನೀರು : ತಗ್ಗು ಪ್ರದೇಶಗಳ ಗ್ರಾಮಸ್ಥರು ಮುಂಜಾಗ್ರತೆ ಕ್ರಮ ವಹಿಸಲು ಜಿಲ್ಲಾಧಿಕಾರಿ...

ಕಾವೇರಿ ನದಿಗೆ ಹೆಚ್ಚಿನ ನೀರು : ತಗ್ಗು ಪ್ರದೇಶಗಳ ಗ್ರಾಮಸ್ಥರು ಮುಂಜಾಗ್ರತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ

ಚಾಮರಾಜನಗರ: ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಬಿಡಲಾಗುತ್ತಿರುವುದರಿಂದ ಜಿಲ್ಲೆಯ ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ಗ್ರಾಮಗಳ ಗ್ರಾಮಸ್ಥರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು ೧,೭೦,೦೦೦ ಕ್ಯೂಸೆಕ್ ಗಿಂತಲೂ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿರುವುದರಿಂದ ನದಿಯ ತಗ್ಗು ಪ್ರದೇಶಗಳಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇ ಹಂಪಾಪುರ, ಹೊಸ ಹಂಪಾಪುರ, ಹಳೆ ಅಣಗಳ್ಳಿ, ಯಡಕುರಿಯ, ಧನಗೆರೆ, ಹರಳೆ, ಅಗ್ರಹಾರ ಮತ್ತು ಸರಗೂರು ಗ್ರಾಮಗಳ ಗ್ರಾಮಸ್ಥರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಹಲವಾರು ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿರುವುದರಿಂದ ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಹಾಗೂ ಭೀತಿಗೆ ಒಳಗಾಗದಿರಲು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಸಾರ್ವಜನಿಕರು ಸ್ಥಳೀಯ ಆಡಳಿತ, ಅಧಿಕಾರಿಗಳು ನೀಡುವ ಸಲಹೆ, ಸೂಚನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದಲ್ಲಿ ಈಗಾಗಲೇ ಸಿದ್ದವಾಗಿರುವ ಕಾಳಜಿ ಕೇಂದ್ರಗಳಿಗೆ ತಕ್ಷಣವೇ ತೆರಳಬೇಕೆಂದು ಜಿಲ್ಲಾಧಿಕಾರಿಯವರು ಕೋರಿದ್ದಾರೆ.

ಜಾನುವಾರುಗಳಿಗೆ ಕೊಳ್ಳೇಗಾಲ ಪಟ್ಟಣದ ಎ.ಪಿ.ಎಂ.ಸಿ ಅವರಣದಲ್ಲಿ ಹಾಗೂ ಸ್ಥಳೀಯ ಗ್ರಾಮದ ಎತ್ತರದ ಸ್ಥಳಗಳಲ್ಲಿ ಗೋಶಿಬಿರಗಳನ್ನು ತೆರೆಯಲು ಪೂರ್ವಸಿದ್ದತೆ ಕೈಗೊಳ್ಳಲಾಗಿದೆ.

ತುರ್ತು ಸಂದರ್ಭಕ್ಕಾಗಿ ಸಹಾಯವಾಣಿ, ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ವಿಪತ್ತು ನಿರ್ವಹಣಾ ಕೇಂದ್ರ ೦೮೨೨೬-೨೨೩೧೬೦, ೦೮೨೨೬-೨೨೩೧೬೧, ೦೮೨೨೬-೨೨೩೧೬೩, ಟೋಲ್ ಫ್ರೀ ಸಂಖ್ಯೆ ೧೦೭೭, ಮೊ.ಸಂ ೯೭೪೦೯೪೨೯೦೧, ಉಪವಿಭಾಗಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗ ಅವರ ಮೊ.ಸಂ ೮೨೭೭೮೬೩೧೧೯, ೯೯೦೦೫೮೨೩೪೧, ಕೊಳ್ಳೇಗಾಲ ತಹಶೀಲ್ದಾರ್ ಅವರ ಮೊ.ಸಂ ೭೮೯೨೯೭೯೪೭೩, ಕೊಳ್ಳೇಗಾಲ ತಾಲೂಕು ಕಚೇರಿಯ ಸಹಾಯವಾಣಿ ಸಂಖ್ಯೆ ೦೮೨೨೪-೨೫೨೩೨೯ ಸಂಪರ್ಕಿಸಬಹುದಾಗಿದೆ.

ಪೊಲೀಸ್ ಇಲಾಖೆ, ಅಗ್ನಿಶಾಮಕ ಮತು ತುರ್ತು ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಖುದ್ದು ಹಾಜರಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular