ಹೆಚ್ಚುವರಿ ಸೆಸ್ ತೆಗೆಯುವಂತೆ ಸಿಎಂಗೆ ಮನವಿ
ಬೆಂಗಳೂರು: ಸಿನಿಮಾ ಟಿಕೆಟ್ ಮತ್ತು ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಫಿಲ್ಮ್ ಚೇಂಬರ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಬಿಲ್ ಪುನರ್ ಪರಿಶೀಲಿಸುವಂತೆ ಮನವಿ ಮಾಡಿರುವುದಾಗಿ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್.ಎಂ ಸುರೇಶ್ ಅವರು, ಕಾರ್ಮಿಕ ಕಲ್ಯಾಣ ನಿಧಿಗೋಸ್ಕರ ಸರ್ಕಾರ ಸಿನಿಮಾ ಟಿಕೆಟ್ ಮತ್ತು ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಸರ್ಕಾರ ತೀರ್ಮಾನ ಮಾಡಿದೆ. ಇದರಿಂದ ನಿರ್ಮಾಪಕರಿಗೆ ಹೊರೆಯಾಗುತ್ತೆ. ಸದ್ಯ ಚಿತ್ರರಂಗ ಸಂಕಷ್ಟದಲ್ಲಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನ ಭೇಟಿಯಾಗಿ ಮನವಿ ಸಹ ಕೊಟ್ಟಿದ್ದೇವೆ. ಹೆಚ್ಚುವರಿ 2% ತೆರೆಗೆ ವಿಧಿಸದಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಪುನರ್ ಪರಿಶೀಲನೆ ಮಾಡಿ ಸರ್ಕಾರ ಹೆಚ್ಚುವರಿ ಸೆಸ್ ತೆಗೆದು ಹಾಕುವಂತೆ ಸಿಎಂ ಅವ್ರಿಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಏನಿದು ಬಿಲ್?
ಸಿನಿಮಾ ಟಿಕೆಟ್ ಮತ್ತು ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ-2024 ಮಂಡಿಸಲಾಗಿದೆ. ಶೇ.1 ಮೀರದಂತೆ ಶೇ.2 ಕ್ಕಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲು ಸರ್ಕಾರ ಮುಂದಾಗಿದ್ದು, ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಅನುಕೂಲವಾಗುವ ರೀತಿ ತೆರಿಗೆ ಸಂಗ್ರಹ ನಡೆಯಲಿದೆ ಎಂದು ಹೇಳಲಾಗಿದೆ. ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗೆ ಮಂಡಳಿ ಸ್ಥಾಪನೆ ಮಾಡಿ. ರಾಜ್ಯದಲ್ಲಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ.
ವಿಧೇಯಕದ ಉದ್ದೇಶವೇನು?
ಕಲಾವಿದರಿಗೆ ಒಳಿತು ಮಾಡುವುದೇ ಈ ಮಸೂದೆಯ ಉದ್ದೇಶ ಎಂದು ಹೇಳಲಾಗುತ್ತಿದೆ. ಕಲಾವಿದ, ತಂತ್ರಜ್ಞ, ನಿರ್ಮಾಪಕರು ಹೀಗೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ನಿಧಿಯ ಭಾಗವಾಗಿರಲಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಂಗಭೂಮಿಯಲ್ಲಿದ್ದವರಿಗೂ ಕೂಡ ಈ ಪ್ರಯೋಜನ ಸಿಗುವಂತೆ ಮಾಡುವ ಆಶಯ ಹೊಂದಿದೆ. ಸರ್ಕಾರವು ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ‘ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಹೆಸರಿನಲ್ಲಿ ನಿಧಿ ಸ್ಥಾಪಿಸಲು ವಿಧೇಯಕವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.