ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ತಿರುಗೇಟು ನೀಡಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ೮೧,೭೯೧ ಕೋಟಿ ರೂ. ನೀಡಿತ್ತು. ಆದರೆ ೨೦೧೪ರಿಂದ ಇಲ್ಲಿಯವರೆಗೆ ಎನ್‌ಡಿಎ ಸರ್ಕಾರ ೨,೯೫,೮೧೮ ಕೋಟಿ ರೂಪಾಯಿ ನೀಡಿದೆ. ಕಳೆದ ೧೦ ವರ್ಷದಲ್ಲಿ ೨,೩೬,೯೫೫ ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದರು.
ಬಜೆಟ್‌ನಲ್ಲಿ ಸ್ಟಾರ್ಟ್ ಅಪ್ ಗಳಿಗೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಕೇಂದ್ರ ಬಜೆಟ್‌ನಲ್ಲಿ ಯುವಕರಿಗೆ ಮೂರು ಯೋಜನೆ ತಂದಿದ್ದೇವೆ. ಯುವಕರಿಗೆ ತರಬೇತಿ, ಇಂಟರ್ನ್‌ಶಿಪ್ ಯೋಜನೆ, ಕೌಶಲ್ಯಾಭಿವೃದ್ಧಿ ನೀಡಲಾಗುವುದು.
ಕಲಬುರಗಿಯಲ್ಲಿ ಪಿಎಂ ಮಿತ್ರಾ ಪಾರ್ಕ್ ನಿರ್ಮಾಣವಾಗಲಿದೆ. ರೈಲ್ವೇ ವಲಯಕ್ಕೂ ಕೋಟಿ ಕೋಟಿ ಹಣ ನೀಡಿದ್ದೇವೆ. ೮೨೫ ಕೋಟಿ ರೂ. ಅನುದಾನ ಯುಪಿಎ ಸರ್ಕಾರ ಇದ್ದಾಗ ನೀಡಿತ್ತು. ಆದರೆ ಈ ಬಜೆಟ್ ನಲ್ಲಿ ೭,೫೫೯ ಕೋಟಿ ಅನುದಾನ ಕೊಟ್ಟಿದ್ದೇವೆ. ೪೭,೦೧೬ ಕೋಟಿ ಮೊತ್ತದ ೩೧ ಯೋಜನೆಯ ರೈಲ್ವೆ ಕಾಮಗಾರಿ ನಡೆಯುತ್ತಿದೆ. ೬೪೦ ರೈಲ್ವೇ ಸೇತುವೆ, ವಂದೇ ಭಾರತ್ ರೈಲು ಸೇರಿ ಹಲವು ರೈಲ್ವೆ ಯೋಜನೆ ಜಾರಿಯಲ್ಲಿವೆ. ಐಐಟಿ ಧಾರವಾಡ, ತುಮಕೂರಲ್ಲಿ ಮೊದಲ ಕೈಗಾರಿಕಾ ಕಾರಿಡಾರ್ ಪಾರ್ಕ್, ೭ ಸ್ಮಾರ್ಟ್ ಸಿಟಿ ನಿರ್ಮಾಣವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ ಎಲ್ಲದರಲ್ಲೂ ತೆರಿಗೆ ಹೆಚ್ಚಿಸಿದೆ. ದರ ಕೂಡ ಹೆಚ್ಚಳ ಆಗುತ್ತಿದೆ. ಸಹಜವಾಗಿ ಹಣದುಬ್ಬರ ಎದ್ದು ಕಾಣುತ್ತಿದೆ. ಕಂಪನಿಗಳು ಹೊರ ರಾಜ್ಯಕ್ಕೆ ಹೋಗುತ್ತಿವೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬರುತ್ತಿಲ್ಲ. ಎಸ್‌ಟಿ ಎಸ್‌ಸಿ ಹಣ ಬೇರೆ ಯೋಜನೆಗೆ ಬಳಕೆಯಾಗಿದೆ. ವಾಲ್ಮೀಕಿ ಹಣ ಏನಾಗಿದೆ ಅಂತ ನಿಮಗೆ ಗೊತ್ತು. ರಾಜ್ಯದಲ್ಲಿ ಈ ರೀತಿಯ ಆಡಳಿತ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದರು.