ಪೂರ್ಣಚೇತನ ಪಬ್ಲಿಕ್ ಶಾಲೆಯ ವಿಶ್ವ ದಾಖಲೆಯ ಅಭಿನಂದನಾ ಸಮಾರಂಭದಲ್ಲಿ ಅಭಿಮತ
ಮೈಸೂರು: ವಿಶ್ವ ಇಂದು ಹವಾಮಾನ ವೈಪರೀತ್ಯಕ್ಕೆ ಬಹು ದೊಡ್ಡ ಬೆಲೆ ತೆರುತ್ತಿದೆ. ನಮ್ಮ ಮುಂದಿನ ಜನಾಂಗಕ್ಕೆ ಈ ಜಗತ್ತನ್ನು ಸುರಕ್ಷಿತವಾಗಿ ನೀಡಿ ಹೋಗಬೇಕಾದರೆ, ನಾವು ಪರಿಸರ ಪ್ರಜ್ಞೆ ಬೆಳೆಸಿಕೊಂಡು, ಪರಿಸರಕ್ಕೆ ತಗ್ಗಿ ಬಗ್ಗಿ ನಡೆಯಬೇಕು. ಮಕ್ಕಳಲ್ಲಿ ಎಳವೆಯಿಂದಲೇ ಪರಿಸರ ಜಾಗೃತಿ ಮೂಡಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿಟಿ ದೇವೇಗೌಡ ತಿಳಿಸಿದ್ದಾರೆ.
ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯಲ್ಲಿ ಭಾನುವಾರ ನಡೆದ 944 ಇಕೋಬ್ರಿಕ್ಸ್ ತಯಾರಿ ಹಾಗು 10,777 ಗ್ರೋ ಬ್ಯಾಗ್ ಗಳಲ್ಲಿ ಬೀಜ ಭಿತ್ತನೆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕದಿಂದಿಡಿದು ಹತ್ತನೇ ತರಗತಿವರೆಗಿನ ೫೫೦ ವಿದ್ಯಾರ್ಥಿಗಳು ಮಂಗಳವಾರ ನಗರದ ಮಾರುಕಟ್ಟೆ ಪ್ರದೇಶಗಳಿಂದ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು 944 ಇಕೋಬ್ರಿಕ್ಸ್ ತಯಾರಿ ಹಾಗು ಅರಣ್ಯ ಇಲಾಖೆ ನಾನಾ ಮರಗಳ ಬೀಜಗಳನ್ನು 10,777 ಗ್ರೋ ಬ್ಯಾಗ್ ಗಳಲ್ಲಿ ಬಿತ್ತುವ ಮೂಲಕ ಅವರು ಈ ದಾಖಲೆ ಸೃಷ್ಟಿಸಿದರು.

ಹಲವಾರು ಬಾರಿ ತುಂತುರು ಮಳೆ ಆಗಮಿಸಿ ಈ ವಿಶ್ವ ದಾಖಲೆಯ ಈ ಪರಿಸರ ಸ್ನೇಹಿ ಪ್ರಯತ್ನಕ್ಕೆ ಪುಷ್ಪವೃಷ್ಟಿಯ ಮೂಲಕ ಶುಭ ಹಾರಿಸುವಂತಹ ವಿಶಿಷ್ಟ ವಾತಾವರಣದಲ್ಲಿ ಮಕ್ಕಳು ಈ ದಾಖಲೆ ಸೃಷ್ಟಿಸಿದರು.
ಎರಡು ಗಂಟೆಗಳಲ್ಲಿ ಈ ಎರಡು ಹೊಸ ದಾಖಲೆಗಳು ಸೃಷ್ಟಿಯಾಗುತ್ತಿದ್ದಂತೆ, ಅಲ್ಲಿ ನೆರೆದಿದ್ದ ನೂರಾರು ಹೆತ್ತವರು, ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸ್ವಚ್ಛ -ಹಸಿರು ಭೂಮಿಗಾಗಿನ ಅವರ ಪ್ರಯತ್ನವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷರಾದ ಡಾ. ವಿದ್ಯಾಸಾಗರ್ ಪಿ, ಈ ಇಡೀ ಪ್ರಯತ್ನದ ಮುಖ್ಯ ಉದ್ದೇಶ ಸಮಾಜದ ಸವಾಲುಗಳಿಗೆ ಮನ ಮಿಡಿಯುವ ಪ್ರಜೆಗಳನ್ನು ನಿರ್ಮಿಸಿ, ಭವ್ಯ ಭಾರತದ ಕನಸನ್ನು ನನಸಾಗಿಸುವುದು ಎಂದು “ಸ್ವಾಮಿ ವಿವೇಕಾನಂದರು ಸೇರಿದಂತೆ, ನಮ್ಮ ಸಂತ ಶ್ರೇಷ್ಠರು, ದಾರ್ಶನಿಕರ ಕನಸು ನನಸಾಗಿಸುವ ಉದ್ದೇಶದಿಂದ, ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ,” ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾಲಾಲ್ ಮಾತನಾಡಿ, ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಪೂರ್ಣ ಚೇತನ ಶಾಲೆ, ನಮ್ಮ ಮುಂದಿನ ಜನಾಂಗವನ್ನು ಪರಿಸರ ಪ್ರೇಮಿಗಳನ್ನಾಗಿಸಿ, ಈ ದೇಶದ ಸಂಪತ್ತಾಗಿಸುತ್ತಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಮಾತಾನಾಡಿ, ಮುಂದಿನ ದಿನಗಳಲ್ಲಿ, ಈ ಇಕೋ ಬ್ರಿಕ್ಸ್ ಹಾಗು ಗ್ರೋ ಬ್ಯಾಗ್ ತಯಾರಿಯನ್ನು ನಿಯಮಿತವಾಗಿ ನಡೆಸಲಾಗುವುದು. “ಆ ಮೂಲಕ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕೆಂಧು ಹುಡುಕುವ ಕೆಲಸವನ್ನು ನಮ್ಮ ಶಾಲೆ ಮಾಡಲಿದೆ. ನಮ್ಮೊಂದಿಗೆ ಸರಕಾರಿಶಾಲೆಗಳನ್ನು ಕೂಡಾ ಒಳಗೊಂಡು ಈ ಪ್ರಯತ್ನ ಮುಂದುವರೆಸುತ್ತೇವೆ,” ಎಂದು ಅವರು ತಿಳಿಸಿದರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ನಾಗರೀಕರನ್ನಾಗಿಸುವ ನಿಟ್ಟಿನಲ್ಲಿ ನಾವು ನಮ್ಮೆಲ್ಲ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮೀತ್ ಕೆ ಹಿಂಗೋರಾಣಿ ರಾಯಭಾರಿ ಮತ್ತು ಹಿರಿಯ ತೀರ್ಪುಗಾರರು ಎಲೈಟ್ ವರ್ಲ್ಡ್ ರೆಕಾರ್ಡ್ಸ್,ಪಿ.ಜಿ. ಪ್ರತಿಬಾ, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ,ಕೆ ಆರ್ ವೆಂಕಟೇಶ್ವರನ್, ರೆಕಾರ್ಡ್ಸ್ ಮ್ಯಾನೇಜರ್ ,ಇಂಡಿಯಾ ರೆಕಾರ್ಡ್ಸ್ ಅಕಾಡೆಮಿ, ಹಾಗೂ ಶಾಲೆಯ ಪ್ರಾಂಶುಪಾಲೆ ಪ್ರಿಯಾಂಕಾ ಬಿ, ಡೀನ್ ಲಾವಣ್ಯ ಉಪಸ್ಥಿತರಿದ್ದರು.