Saturday, April 19, 2025
Google search engine

Homeರಾಜ್ಯಚಿಕ್ಕಮಗಳೂರು ಜಿಲ್ಲೆಯ ಮಳೆ ಹಾನಿಗೆ ವಿಶೇಷ ನೆರವು ನೀಡಲು ಸಿಎಂಗೆ ಮನವಿ: ಕೆ.ಜೆ.ಜಾರ್ಜ್

ಚಿಕ್ಕಮಗಳೂರು ಜಿಲ್ಲೆಯ ಮಳೆ ಹಾನಿಗೆ ವಿಶೇಷ ನೆರವು ನೀಡಲು ಸಿಎಂಗೆ ಮನವಿ: ಕೆ.ಜೆ.ಜಾರ್ಜ್

ತುರ್ತು ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ

ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯಾದ್ಯಂತ ಆಗಿರುವ ಅಪಾರ ಪ್ರಮಾಣದ ಹಾನಿಗೆ ವಿಶೇಷ ಪರಿಹಾರ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಮತ್ತು ಪ್ರವಾಹದಿಂದ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿಯವರ ಭೇಟಿಗೆ ಸದ್ಯದಲ್ಲೇ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ  ಮಳೆ ಮತ್ತು ಪ್ರವಾಹದಿಂದ ಆಗಿರುವ ಹಾನಿ ಮತ್ತು ಒಟ್ಟಾರೆ ನಷ್ಟದ ಕುರಿತು  ಸಮಗ್ರ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದೇನೆ,” ಎಂದು ತಿಳಿಸಿದರು.

“ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ತಿಳಿಯಲು ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದ್ದೇನೆ. ಸಮಸ್ಯೆಗಳಿಗೆ ತಕ್ಷಣ ತಾತ್ಕಾಲಿಕ ಪರಿಹಾರ ಕಲ್ಪಿಸುವುದರ ಜತೆಗೆ ಶಾಶ್ವತ ಪರಿಹಾರಕ್ಕೂ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದೇನೆ. ಈ ಎಲ್ಲಾ ವಿಚಾರಗಳನ್ನು ಜಿಲ್ಲೆಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿಯವರೊಂದಿಗಿನ ಭೇಟಿ ವೇಳೆ ಚರ್ಚಿಸಲಾಗುವುದು,” ಎಂದರು.

350 ಮನೆಗಳಿಗೆ ಹಾನಿ:

ಮಳೆಹಾನಿ ಕುರಿತಂತೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, “ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 64ರಷ್ಟು ಹೆಚ್ಚುವರಿ ಮಳೆ ಜಿಲ್ಲೆಯಲ್ಲಿ ಬಂದಿದ್ದು, ಇದರಿಂದ 350 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 111 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಉಳಿದ ಮನೆಗಳು ಬಹುತೇಕ ಹಾನಿಗೊಳಗಾಗಿವೆ. ಕಳೆದ ಎರಡು ದಿನಗಳಲ್ಲಿ ಕುಸಿದಿರುವ ಮನೆಗಳನ್ನು ಹೊರತುಪಡಿಸಿ ಇತರೆ ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಶೇ. 25ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಹಾನಿಗೊಳಗಾದ ಮನೆಗಳಿಗೆ 6,500 ರೂ. ತಾತ್ಕಾಲಿಕ ಪರಿಹಾರ ವಿತರಿಸಲಾಗಿದೆ,” ಎಂದರು.

“ಅದೇ ರೀತಿ ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದ್ದು, ಸುಮಾರು 55 ಕೋಟಿ ರೂ. ಹಾನಿಯಾಗಿದೆ. ಕೆಲವೆಡೆ ಸಂಪರ್ಕ ಕಡಿದಿದ್ದು, ಅಂತಹ ಪ್ರದೇಶಗಳ ಸಂಪರ್ಕಕ್ಕೆ ಬೇರೆ ಮಾರ್ಗಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ,” ಎಂದು ಮಾಹಿತಿ ನೀಡಿದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ಮಾಹಿತಿ ನೀಡಿ, “ಮಳೆ ಮತ್ತು ಗಾಳಿಯಿಂದ ಮರಗಳು ಬಿದ್ದು ವಿದ್ಯುತ್ ಕಂಬ, ತಂತಿ, ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿ ಮೆಸ್ಕಾಂಗೆ 8.5 ಕೋಟಿ ರೂ. ನಷ್ಟವಾಗಿದೆ. ದುರಸ್ತಿ ಕಾರ್ಯವನ್ನು ತ್ವರಿತಗೊಳಿಸಲಾಗಿದ್ದು, ಹೆಚ್ಚುವರಿ ಗ್ಯಾಂಗ್ ಮೆನ್ ಗಳನ್ನು ಒದಗಿಸಿ ದುರಸ್ತಿ ಕೆಲಸ ಮಾಡಿಸಲಾಗುತ್ತಿದೆ,” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಆಗಿರುವ ಹಾನಿಗಳಿಗೆ ನಿಯಮಾವಳಿ ಪ್ರಕಾರ ಪರಿಹಾರ ನೀಡಿದರೆ ಅದು ಸಾಕಾಗುವುದಿಲ್ಲ. ಹೀಗಾಗಿ ವಿಶೇಷ ಪರಿಹಾರಕ್ಕಾಗಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು. ಆ ಮೂಲಕ ಜಿಲ್ಲೆಗೆ ಹೆಚ್ಚಿನ ನೆರವು ಕೋರಲಾಗುವುದು,” ಎಂದು ತಿಳಿಸಿದರು.

ಅಧಿಕಾರಿಗಳು ಶಾಸಕರ ಸಲಹೆ ಪಡೆಯಬೇಕು:

“ರಸ್ತೆಗಳು ಕುಸಿದಿರುವ ಕಡೆ ಅಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಮುಂದೆ ಅನಾಹುತ ಸಂಭವಿಸಬಹುದಾದ ಸ್ಥಳಗಳಲ್ಲಿ ಈಗಲೇ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳೀಯ ಶಾಸಕರ ಸಲಹೆ ಪಡೆದು ಕೆಲಸ ಮಾಡಬೇಕು. ಅದೇ ರೀತಿ ಶಾಸಕರು ಕೂಡ ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಳೆಹಾನಿ ಪರಿಹಾರಕ್ಕೆ ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು,” ಎಂದು ಸಚಿವರು ತಿಳಿಸಿದರು.

ಜಿಲ್ಲೆಯನ್ನು ಪ್ರವಾಹ ಪೀಡಿತ ಎಂದು ಘೋಷಿಸುವಂತೆ ಈ ವೇಳೆ ಶಾಸಕರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, “ಈವರೆಗೆ ಸರ್ಕಾರ ಈ ರೀತಿ ಘೋಷಣೆ ಮಾಡಿಲ್ಲ. ಘೋಷಣೆ ಮಾಡುವ ವೇಳೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಿಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular