ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆಯ ಆಹಾರ, ಬಟ್ಟೆ ಮತ್ತು ಇತರ ಕೆಲವು ವ್ಯವಸ್ಥೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿದ್ದಾರೆ.
ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಮೆಮೊ ಸಲ್ಲಿಸಿದ ನಂತರ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು.
ಇತ್ತೀಚೆಗಷ್ಟೇ ಹೈಕೋರ್ಟ್ ಅರ್ಜಿಯ ವಿಚಾರಣೆಗೆ ಮುನ್ನ ಪ್ರಕರಣ ಬಾಕಿ ಇರುವ ವಿಚಾರಣಾ ನ್ಯಾಯಾಲಯವನ್ನೇ ಸಂಪರ್ಕಿಸುವಂತೆ ಸೂಚಿಸಿತ್ತು. ಅದರ ನಂತರ ಮನೆಯ ಊಟ ಮತ್ತು ಹಾಸಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಜುಲೈ 25 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.
ಅರ್ಜಿ ವಜಾಗೊಂಡ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.
ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.