Saturday, April 19, 2025
Google search engine

Homeರಾಜ್ಯಸುದ್ದಿಜಾಲಕನ್ನಡಿಗರಲ್ಲಿ ಏಕೀಕರಣ ಪ್ರಜ್ಞೆ ಮೂಡಿಸಿದ ಆಲೂರರು: ಸಾಹಿತಿ ಬನ್ನೂರು ರಾಜು

ಕನ್ನಡಿಗರಲ್ಲಿ ಏಕೀಕರಣ ಪ್ರಜ್ಞೆ ಮೂಡಿಸಿದ ಆಲೂರರು: ಸಾಹಿತಿ ಬನ್ನೂರು ರಾಜು

ಹುಣಸೂರು: ಆಲೂರು ವೆಂಕಟರಾಯರೆಂದರೆ ಅಕ್ಷರಶಃ ಕನ್ನಡ ಕುಲಪುರೋಹಿತರೇ ಆಗಿದ್ದು ಒಂದು ಕಣ್ಣಲ್ಲಿ ಕನ್ನಡ ಅಭಿಮಾನ ಮತ್ತೊಂದು ಕಣ್ಣಲ್ಲಿ ದೇಶಾಭಿಮಾನ ತುಂಬಿಕೊಂಡು ಅಪ್ರತಿಮ ಕನ್ನಡ ಸೇನಾನಿಯಾಗಿ, ಅಸಾಧಾರಣ ಸ್ವಾತಂತ್ರ್ಯಯೋಧರಾಗಿ ಕನ್ನಡಿಗರಲ್ಲಿ ಕನ್ನಡ ಮತ್ತು ಕರ್ನಾಟಕ ಏಕೀಕರಣದ ಪ್ರಜ್ಞೆ ಮೂಡಿಸಿದ ಕರ್ನಾಟಕ ನಿರ್ಮಾಣದ ಶಿಲ್ಪಿಗಳೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.

ಹುಣಸೂರು ತಾಲೂಕಿನ ಧರ್ಮಾಪುರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮೈಸೂರಿನ ಪ್ರತಿಷ್ಠಿತ ಶೈಕ್ಷಣಿಕ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಹಾಗೂ ಧರ್ಮಾಪುರ ಸರ್ಕಾರಿ ಪ್ರೌಢ ಶಾಲೆಯು ಒಟ್ಟಾಗಿ ಆಯೋಜಿಸಿದ್ದ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟ ರಾಯರ ಜನ್ಮದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು, ಕರ್ನಾಟಕ ನಿರ್ಮಾಣದ ಮಹಾ ಶಿಲ್ಪಿಯಾದ ಆಲೂರರ ಬಹಳ ದಿನಗಳ ಸಂಶೋಧನೆ ಮತ್ತು ಅಧ್ಯಯನ ಹಾಗೂ ಪ್ರಾಮಾಣಿಕ ಶ್ರಮದ ಫಲವೇ ‘ಕರ್ನಾಟಕ ಗತವೈಭವ’ ಕೃತಿಯಾಗಿದ್ದು ಕರ್ನಾಟಕತ್ವದೊಡನೆ ಎಲ್ಲರಲ್ಲೂ ಕನ್ನಡ ಪ್ರಜ್ಞೆ ಮೂಡಿಸಿ ಕನ್ನಡಾಭಿಮಾನದ ಬೀಜ ಬಿತ್ತಿ ಬೆಳೆಯುವ ಮಹತ್ವದ ಕೃತಿಯಾಗಿದ್ದು ಇದು ಸರ್ಕಾರದಿಂದ ಮತ್ತೆ ಮತ್ತೆ ಮರು ಮುದ್ರಣಗೊಂಡು ಪ್ರತಿಯೊಬ್ಬ ಕನ್ನಡಿಗರಿಗೂ ತಲುಪಬೇಕೆಂದರು.

ಅಖಂಡ ಕರ್ನಾಟಕದ ಸುವರ್ಣ ಇತಿಹಾಸವನ್ನು ಇಂಚಿಂಚೂ ಬಿಡದಂತೆ ಹೇಳುವ ‘ಕರ್ನಾಟಕ ಗತ ವೈಭವ’ ಮಹಾ ಗ್ರಂಥವು ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾಯರ ಕರ್ನಾಟಕದ ಪರಿಕಲ್ಪನೆಯ ಆಚಾರ್ಯ ಕೃತಿಯಾಗಿದ್ದು, ಇದು ಕನ್ನಡ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರಸ್ತುತ ಈ ಕೃತಿಯು ಹಿಂದಿಗಿಂತಲೂ ಇಂದು ಹೆಚ್ಹು ಅವಶ್ಯಕವಾಗಿದ್ದು ನಮ್ಮ ಶಾಲಾ ಕಾಲೇಜುಗಳಿಗೆ ಪಠ್ಯ ಪುಸ್ತಕವಾಗಬೇಕು. ತನ್ಮೂಲಕ ಇದರ ಅರಿವು ಮುಂದಿನ ಪೀಳಿಗೆಗೆ ಬರುವಂತಾಗಬೇಕು.

ಸಾಹಿತ್ಯ ಬರಹ, ಸಂಶೋಧನೆ, ಪುಸ್ತಕ ಪ್ರಕಟಣೆ ಹಾಗೂ ಹೋರಾಟದ ಮೂಲಕ ಕನ್ನಡಿಗರನ್ನು ಜಾಗೃತಿಗೊಳಿಸಿದ ಕರ್ನಾಟಕ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಬದುಕೆಂದರೆ ಅದು ಸಂಪೂರ್ಣ ಕನ್ನಡವನ್ನು ಮತ್ತು ಕರ್ನಾಟಕವನ್ನು ಕಟ್ಟುವ ಬದುಕಾಗಿತ್ತು. ಐದು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿ ಹೋರಾಟ ಮಾಡಿದ ಆಲೂರರ ಲೇಖನಿ ಕೂಡ ಈ ದಿಸೆಯಲ್ಲಿ ಕನ್ನಡದ ಖಡ್ಗವಾಗಿ ಕೆಲಸ ಮಾಡಿದೆ. ತಾವೂ ಬರೆದು ಇತರರಿಂದಲೂ ಬರೆಸಿ ಸ್ವತಃ ತಾವೇ ಪ್ರಕಟ ಮಾಡಿ ಆ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರು-ಕೇರಿ, ಬೀದಿ-ಗಲ್ಲಿಗಳಲ್ಲಿ ಸುತ್ತಿ ಅಲೆದಾಡಿ ಮಾರಾಟ ಮಾಡಿ ಕರ್ನಾಟಕ ಕಟ್ಟಿದ ಆಲೂರರ ಐದು ದಶಕಗಳ ಅವಿರತ ಹೋರಾಟದ ನಂತರ ಕರ್ನಾಟಕ ಏಕೀಕರಣವಾಯಿ ತು. ಇವತ್ತೇನಾದರೂ ಇಷ್ಟರಮಟ್ಟಿಗಾದರೂ ಕನ್ನಡ ಮತ್ತು ಕರ್ನಾಟಕ ಸುಭದ್ರವಾಗಿದೆಯೆಂದರೆ ಇದಕ್ಕೆ ಆಲೂರರಂತಹ ಕನ್ನಡ ಕೆಚ್ಚಿನ ಮಹಾ ಚೇತನಗಳೇ ಕಾರಣವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ, ವಿಶ್ರಾಂತ ಶಿಕ್ಷಕ ಹಾಗೂ ಶಿಕ್ಷಣ ಕ್ಷೇತ್ರದ ಹಿರಿಯ ಸಂಪನ್ಮೂಲ ವ್ಯಕ್ತಿ ಎಂ.ಎನ್. ಸುರೇಶ್ ಅವರು, ಶಿಕ್ಷಣ ಮತ್ತು ಪ್ರತಿಭೆ ಎಂಬುದು ಎಲ್ಲರೊಳಗೂ, ಹೊರಗೂ ಇರುತ್ತದೆ. ಅದನ್ನು ಆಸಕ್ತಿಯಿಂದ ಕ್ರಿಯಾತ್ಮಕವಾಗಿ ವಿಕಸನಗೊಳಿಸಿಕೊಳ್ಳುವುದೇ ನಿಜವಾದ ಶಿಕ್ಷಣ. ಅದೇ ಬುದ್ಧಿವಂತಿಕೆ. ಶಿಕ್ಷಣದ ರೂಪದಲ್ಲಿ ಕಲಿಕೆ ಎಂಬುದು ನಮ್ಮ ಸುತ್ತಲೂ ಕೈಚಾಚಿ ಕರೆಯುತ್ತಿರುತ್ತದೆ. ಅದನ್ನು ಗ್ರಹಿಸಿಕೊಂಡು ಜ್ಞಾನವನ್ನು ನಮ್ಮೊಳಕ್ಕೆ ತುಂಬಿಕೊಳ್ಳಬೇಕು. ಇದಕ್ಕೆ ಬೇಕಾಗಿರುವುದು ಅಗಾಧ ಪರಿಶ್ರಮ, ತಾಳ್ಮೆ, ಏಕಾಗ್ರತೆ, ಅಧ್ಯಯನಶೀಲತೆ, ಎಲ್ಲಕ್ಕಿಂತ ಹೆಚ್ಚಾಗಿ ಗುರಿಯತ್ತ ದಿಟ್ಟ ಹೆಜ್ಜೆ. ಜ್ಞಾನ ಎಲ್ಲಿಂದಲೇ ಬರಲಿ ಅದನ್ನು ಸ್ವೀಕರಿಸುವ ಮನೋಭಾವ ಮತ್ತು ಮನೋಸ್ಥಿತಿಗಳೆರಡೂ ವಿದ್ಯಾರ್ಥಿಗಳಲ್ಲಿ ಇದ್ದಲ್ಲಿ ಯಶಸ್ಸು ಕಾಣಬಹುದು ಎಂದು ಕಿವಿ ಮಾತು ಹೇಳಿದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಸ್ತುತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿತರಾದ ವಿದ್ಯಾರ್ಥಿಗಳಾದ ಕು.ನಮ್ರತಾ, ಕು.ತ್ರಿವೇಣಿ ಹಾಗೂ ಸಂಜಯ್ ಅವರುಗಳಿಗೆ ತಲಾ ಒಂದು ಸಾವಿರ ರೂಗಳ ನಗದು ಬಹುಮಾನ ನೀಡಿ ಅಭಿನಂದಿಸಿದರು. ಹಾಗೆಯೇ ಇದೇ ಸಂದರ್ಭದಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರ ಜನ್ಮದಿನೋತ್ಸ ವದ ದ್ಯೋತಕವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮಅವರು ಬಹುಮಾನ ವಿತರಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಡಿ.ಎಂ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಶಿವರುದ್ರಪ್ಪ, ಜಿ.ಆರ್.ನವೀನ್ ಕುಮಾರ್, ಈ. ಪ್ರವೀಣ್ , ಎಂ.ಆಶಾ, ದ್ವಿತೀಯ ದರ್ಜೆ ಸಹಾಯಕ ಕೃಷ್ಣಾಚಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜನಾಯಕ ಮುಂತಾದವರಿದ್ದರು. ಇಡೀ ಕಾರ್ಯಕ್ರಮವನ್ನು ಕನ್ನಡ ಭಾಷಾ ಶಿಕ್ಷಕ ಜಿ.ಆರ್.ನವೀನ್ ಕುಮಾರ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.

RELATED ARTICLES
- Advertisment -
Google search engine

Most Popular