ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವನ್ನು ಮುಂದಿಟ್ಟುಕೊಂಡು, ಬದಲಿ ನಿವೇಶನವನ್ನು ನಿಯಾಮಾನುಸಾರ ಪಡೆದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿರುವುದು ಜನಪ್ರಿಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವಕ್ತಾರ ಮಹೇಶ್ ಕೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು 2023ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದನ್ನು ಮತ್ತು ಎರಡನೇ ಬಾರಿಗೆ ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೇ ಬಿಜೆಪಿ ನಾಯಕರು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳಂಕ ರಹಿತ, ಶುದ್ಧ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವುದು ಅಕ್ಷಮ್ಯವಾಗಿದೆ.
ಭ್ರಷ್ಟಾಚಾರದ ಜನಕರಾಗಿರುವ ಬಿಜೆಪಿ ನಾಯಕರು, ರೆಸಾರ್ಟ್ ರಾಜಕಾರಣ ಆರಂಭಿಸಿದವರು, ಆರ್‌ಟಿಜಿಎಸ್ ಮೂಲಕ ಹಣ ಪಡೆದು ಜೈಲು ಸೇರಿದವರು ಹೀಗೆ ಅವರ ಇತಿಹಾಸವೇ ಕಪ್ಪು ಚುಕ್ಕೆಯಿಂದ ಕೂಡಿದೆ. ಅಹಿಂದ ವರ್ಗಗಳು ಬಿಜೆಪಿಯ ನಾಯಕರ ಕುಟಿಲ ಬುದ್ಧಿಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಮುಡಾ ಹಗರಣವನ್ನು ಮುಂದಿಟ್ಟುಕೊಂಡು ನಡೆಸಲಿರುವ ಪಾದಯಾತ್ರೆಯೂ ಬಿಜೆಪಿ ನಾಯಕರ ಮತ್ತೊಂದು ನಾಟಕ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.