ಹಾಸನ: ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ ಎನ್ನುವಂತೆ ಈ ಬಾರಿ ಮುಂಗಾರು ಮಳೆಯ ಆಟದಿಂದ ಸದ್ಯ ತರಕಾರಿಗಳ ದರ ಗಗನಕ್ಕೇರಿದ್ದು, ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಸದ್ಯ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಳೆಯುವ ರೈತರಿಗೆ, ಮಾರುವ ವ್ಯಾಪರಸ್ಥರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಆಗಿದೆ.
ಬಂಗಾರದ ಬೆಲೆಯಾಗಿರುವ ಟೊಮೆಟೊವನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ಒಂದು ಸವಾಲಾಗಿದ್ದು, ಮೊದಲೆಲ್ಲ ಮನೆ, ಬೆಲೆ ಬಾಳುವ ವಸ್ತುಗಳಿರುವ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ಟೊಮೊಟೊ ಜಮೀನಿಗೆ ಕನ್ನ ಹಾಕುತ್ತಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ. ಇಂತಹ ಒಂದು ಘಟನೆ ನಮ್ಮ ಕರ್ನಾಟಕದಲ್ಲಿಯೇ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೊಟೊ ಕಳ್ಳತನ ನಡೆದಿದ್ದು, ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದಾರೆ. ಗೋಣಿ ಸೋಮನಹಳ್ಳಿಯ ಧರಣಿ ಎನ್ನುವ ರೈತನ ಜಮೀನಿನಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಧರಣಿ ಅವರ ಜಮೀನಿನಲ್ಲಿ ಈ ಬಾರಿ ಉತ್ತಮ ಟೊಮೆಟೊ ಇಳುವರಿ ಬಂದಿದ್ದು, ಗರಿಷ್ಠ ದರ ಇರುವುದರಿಂದ ಕಳೆದ ಮೂರು ದಿನದಿಂದ ಟೊಮೆಟೊ ಕೊಯ್ದು ಮಾರಾಟ ಮಾಡುತ್ತಿದ್ದರು. ಆದರೆ, ಕಳೆದ ರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಚೀಲದಷ್ಟು ಟೊಮೆಟೊ ಕಳ್ಳತನ ಮಾಡಿದ್ದಾರೆ. ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ರೈತ ಧರಣಿ ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.