Saturday, April 19, 2025
Google search engine

Homeರಾಜ್ಯ’ದುರ್ಯೋಧನ ಗೆಲ್ಲುತ್ತಾನೆ, ಭೀಮ‌ ಸೋಲುತ್ತಾನೆ’: ಸಿಎಂ ಬದಲಾವಣೆ ಬಗ್ಗೆ ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ

’ದುರ್ಯೋಧನ ಗೆಲ್ಲುತ್ತಾನೆ, ಭೀಮ‌ ಸೋಲುತ್ತಾನೆ’: ಸಿಎಂ ಬದಲಾವಣೆ ಬಗ್ಗೆ ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ, “ಸದ್ಯಕ್ಕೆ ಏನೂ ತೊಂದರೆ ಕಾಣುತ್ತಿಲ್ಲ. ಮುಂದೆ ತೊಂದರೆ ಆಗುತ್ತಾ ಎಂಬುದಕ್ಕೆ, ಬೇಡ ಮತ್ತು ಸನ್ಯಾಸಿಯ ಕಥೆ ಏನಾದರೂ ಹೇಳಿದ್ರೆ ಮುಂದೆ ಓಡಾಡದ ಹಾಗೆ ಮಾಡಿಬಿಟ್ಟೀರಾ..” ಎಂದು ಹಾಸ್ಯ ಚಟಾಕಿ ಹಾರಿಸಿದರು‌.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, “ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಆಗ ಒಬ್ಬ ಬೇಟೆಗಾರ ಬೇಟೆಗೆ ಜಿಂಕೆ ಓಡಿಸಿಕೊಂಡು ಬಂದನಂತೆ. ಸನ್ಯಾಸಿ ಮುಂದೆ ಜಿಂಕೆ ಹೋಯಿತಂತೆ. ಆಗ ಬೇಟೆಗಾರ ಸನ್ಯಾಸಿ ಬಳಿ ಜಿಂಕೆ ಹೋಯಿತಾ ಎಂದು ಕೇಳಿದನಂತೆ. ಅದಕ್ಕೆ ಸನ್ಯಾಸಿ ಹೋಯಿತು ಅಂತ ಹೇಳಿದ್ರೆ ಕೊಂದ ಪಾಪ ತಟ್ಟುತ್ತೆ, ಇಲ್ಲ ಅಂತ ಹೇಳಿದರೆ ಸುಳ್ಳು ಹೇಳಿದ ಪಾಪವೂ ತಟ್ಟುತ್ತದೆ. ಹೀಗಿದ್ದಾಗ ಯಾವುದು ನೋಡಿತು ಅದಕ್ಕೆ ಮಾತು ಬರಲ್ಲ, ಯಾವುದು ಮಾತನಾಡಿತು ಅದಕ್ಕೆ ಮಾತನಾಡಲು ಬರಲ್ಲ ಎಂದಿದ್ದನಂತೆ” ಎಂದು ಕಥೆ ಬಿಚ್ಚಿಟ್ಟರು.

“ಜನರು ಎಲ್ಲವನ್ನೂ ಮನಃಶಾಂತಿಯಿಂದ ತೆಗೆದುಕೊಳ್ಳುತ್ತಿಲ್ಲ. ದ್ವೇಷ ಭಾಷೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಆತ್ಮಸಾಕ್ಷಿಯಾಗಿ ಜನರು‌ ಮತ ನೀಡುತ್ತಿಲ್ಲ. ಎಲ್ಲಿಯವರೆಗೆ ಮತಗಳನ್ನು ಮಾರಾಟ ಮಾಡುತ್ತಾರೋ ಅಲ್ಲಿಯವರೆಗೆ ಲಾಭ – ನಷ್ಟ ಇರುತ್ತದೆ. ಹಿಂದಿನ‌ ಕಾಲದಲ್ಲಿ ಧರ್ಮದ ಅನುಮತಿ ಪಡೆದು ರಾಜಕಾರಣ ಮಾಡುತ್ತಿದ್ದರು. ಈಗ ಧರ್ಮವೂ ಇಲ್ಲ, ಗುರಿಯೂ ಇಲ್ಲ, ದುಡ್ಡು ಮಾಡೋದಷ್ಟೇ ಗುರಿ. ಹಾಗಾಗಿ ಬಹುಬೇಗ ಇವರಿಗೆ ಅಪಘಾತಗಳು ಆಗುತ್ತಿವೆ. ಮನುಷ್ಯ ಯಾವುದೇ ಅಪೇಕ್ಷೆ ಇಲ್ಲದೇ ಮತ ಹಾಕುತ್ತಾನೋ. ಅಲ್ಲಿಯವರೆಗೆ ರಾಮರಾಜ್ಯ ಸಿಗಲ್ಲ” ಎಂದು ಹೇಳಿದರು.

“ಇದು ಕ್ರೋಧಿನಾಮ ಸಂವತ್ಸರ. ಕ್ರೋಧ ಅಂದರೆ ಸಿಟ್ಟು, ಇದರಲ್ಲಿ ಒಳ್ಳೆಯದು, ಕೆಟ್ಟದ್ದು ಇದೆ. ಆ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತದೆ. ಪ್ರಾಕೃತಿಕ ದೋಷ ಮುಂದುವರೆಯುತ್ತದೆ. ಅಮವಾಸ್ಯೆವರೆಗೆ ಒಂದು ಭಾಗಕ್ಕೆ ನಿಲ್ಲುತ್ತದೆ. ನಂತರ ಮತ್ತೊಂದು ಭಾಗಕ್ಕೆ ಹೋಗುತ್ತದೆ. ಮುಂದೆ ಅನಿಷ್ಠ ಜಾಸ್ತಿ ಇದೆ. ಕತ್ತಲು ಬೆಳಕು ಎರಡು ಇರುತ್ತದೆ. ಅದರಲ್ಲಿ ಕತ್ತಲು ಜಾಸ್ತಿ ಇರುತ್ತದೆ” ಎಂದು ನುಡಿದರು.

“ಕೇರಳದಲ್ಲಿ ಭೂಕುಸಿತ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, “ಕಳೆದ ಇಪ್ಪತ್ತು ದಿನಗಳ ಹಿಂದೆ ನಾನು ಧಾರವಾಡದಲ್ಲಿ ಈ ಥರಾ ಆಗುತ್ತೆ ಅಂತ ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ. ರೋಗರುಜಿನಗಳು ಹೆಚ್ಚಾಗುತ್ತವೆ ಅಂತಾ ಹೇಳಿದ್ದೆ. ಇದು ಭಾರತ ಅಂತಷ್ಟೇ ಹೇಳಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತ ಹೇಳಿದ್ದೆ. ನನ್ನ ಪ್ರಕಾರ ಅಮವಾಸ್ಯೆವರೆಗೆ ಮಳೆ ಇರುತ್ತದೆ. ಬಳಿಕ ಬೇರೆ ಭಾಗಕ್ಕೆ ಹೋಗುತ್ತದೆ” ಎಂದು ಹೇಳಿದರು.

“ಬರುವ ದಿನಗಳಲ್ಲಿ ರೋಗರುಜಿನಗಳು ಸ್ವಲ್ಪ ಜಾಸ್ತಿಯಾಗುತ್ತವೆ. ಅಲ್ಪಾಯಸ್ಸು ಕಡಿಮೆ ಆಗುತ್ತೆ. ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಅಷ್ಟೊಂದು ಶುಭವಾಗಿಲ್ಲ. ಒಳ್ಳೆಯದು ಇದ್ದಾವೆ ಆದರೆ, ಬೆಳಕನ್ನು ಕಪ್ಪು ಓರೆ ಮಾಡಿದಾಗ ಕಪ್ಪೇ ಜಾಸ್ತಿ” ಎಂದು ಎಚ್ಚರಿಸಿದರು.

“ಕಳೆದ ಇಪ್ಪತ್ತು ದಿನಗಳ ಹಿಂದೆ ಲೋಕಸಭಾ ಚುನಾವಣೆ ಕುರಿತಾಗಿ ಮಹಾಭಾರತದ ಸನ್ನಿವೇಶವನ್ನೂ ಧಾರವಾಡದಲ್ಲಿ ಹೇಳಿದ್ದೆ. ಅದರಲ್ಲಿ ಅಭಿಮನ್ಯುವನ್ನು ಎಲ್ಲರೂ ಕೂಡಿ ಮೋಸದಲ್ಲಿ ಕೊಲ್ಲುತ್ತಾರೆ ಅಂತ ಹೇಳಿದ್ದೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಎನ್ನುವ ಕಾರಣಕ್ಕೆ ಭೀಮ ಗೆದ್ದ ದುರ್ಯೋಧನ ಸೋತ. ಆದರೆ ಇಲ್ಲಿ ಕೃಷ್ಣ ಇಲ್ಲ, ದುರ್ಯೋಧನ ಗೆಲ್ಲುತ್ತಾನೆ, ಭೀಮ‌ ಸೋಲುತ್ತಾನೆ” ಎಂದು ಸ್ವಾಮೀಜಿ ಒಗಟಾಗಿ ಹೇಳಿದರು.

RELATED ARTICLES
- Advertisment -
Google search engine

Most Popular