Saturday, April 19, 2025
Google search engine

Homeರಾಜ್ಯಭಾರಿ ಮಳೆಯಿಂದ ಎಸ್ಕಾಂಗಳಿಗೆ 96.66 ಕೋಟಿ ರೂ. ನಷ್ಟ: ಕೆ.ಜೆ.ಜಾರ್ಜ್

ಭಾರಿ ಮಳೆಯಿಂದ ಎಸ್ಕಾಂಗಳಿಗೆ 96.66 ಕೋಟಿ ರೂ. ನಷ್ಟ: ಕೆ.ಜೆ.ಜಾರ್ಜ್

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎಸ್ಕಾಂಗಳಿಗೆ ಒಟ್ಟಾರೆ 96.66 ಕೋಟಿ ರೂ. ನಷ್ಟವಾಗಿದ್ದು, ಹಾನಿಗೊಳಗಾಗಿರುವ ಸಾವಿರಾರು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳು ಹಾಗೂ ಲೈನ್‌ಗಳನ್ನು ದುರಸ್ತಿಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿಯಿಂದಾಗಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪರಿಸ್ಥಿತಿಗಳ ಕುರಿತು ಎಲ್ಲಾ ಎಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಮಳೆಯಿಂದ ಹಾನಿಗೊಳಗಾಗಿರುವ ವಿದ್ಯುತ್ ತಂತಿ, ಕಂಬ ಮತ್ತು ಟ್ರಾನ್ಸ್ ಫಾರಂಗಳನ್ನು ಮರುಸ್ಥಾಪನೆ ಮಾಡಿ ವಿದ್ಯುತ್ ಪೂರೈಸಲು ಸ್ಥಳೀಯ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕೆಲಸಗನ್ನು ತ್ವರಿತವಾಗಿ ಪೂರ್ಣಗೊಳಿಸಲು ತುರ್ತು ಪರಿಹಾರ ವ್ಯಾಪ್ತಿಯಲ್ಲಿ ಸ್ಥಳೀಯವಾಗಿಯೇ ಅಗತ್ಯ ಗ್ಯಾಂಗ್ ಮೆನ್, ಲೈನ್ ಮೆನ್ ಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಆಯಾ ಎಸ್ಕಾಂಗಳಿಗೆ ನಿರ್ದೇಶನ ನೀಡಲಾಗಿದೆ.”

– ಗೌರವ್ ಗುಪ್ತಾ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

“ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ಟ್ರಾನ್ಸ್ ಫಾರ್ಮರ್ ಗಳು, 1,120 ಕಿ.ಮೀ. ವಿದ್ಯುತ್ ತಂತಿಗಳು ಹಾನಿಗದೊಳಗಾಗಿದ್ದು. ಈ ಪೈಕಿ 51,119 ಕಂಬಗಳು, 3,918 ಟ್ರಾನ್ಸ್ ಫಾರ್ಮರ್ ಗಳು, 1,063 ಕಿ.ಮೀ. ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಎಸ್ಕಾಂ ಸಿಬ್ಬಂದಿ ಸತತವಾಗಿ ಶ್ರಮಿಸುತ್ತಿದ್ದಾರೆ,” ಎಂದರು.

“ವಿದ್ಯುತ್ ಕಂಬ, ತಂತಿ, ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿಗೆ ಮೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರಿ ಮಳೆ ಬೀಳುತ್ತಿರುವ ಮಲೆನಾಡು, ಕರಾವಳಿ ಮತ್ತು ಬೆಳಗಾವಿ ಭಾಗಗಳಲ್ಲಿ ನೀರಿನ ಮಧ್ಯೆಯೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಹೆಚ್ಚುವರಿ ಗ್ಯಾಂಗ್ ಮೆನ್ ಮತ್ತು ಲೈನ್ ಮೆನ್ ಗಳನ್ನು ನೇಮಿಸುವುದರ ಜತೆಗೆ ಗುತ್ತಿಗೆದಾರರ ನೆರವಿನೊಂದಿಗೆ ತಂಡಗಳನ್ನು ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಮರು ಸಂಪರ್ಕಕ್ಕೆ ಕಂಬಗಳು, ಕಂಡಕ್ಟರ್ ಗಳು, ತಂತಿಗಳ ಕೊರತೆಯಾಗದಂತೆ ಮೊದಲೇ ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಇದರಿಂದ ಮಳೆಯಿಂದ ಆಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುತ್ತಿದೆ,” ಎಂದು ತಿಳಿಸಿದರು.

“ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅನುಕೂಲವಾಗುವಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಹಾರ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಳೆ ಮತ್ತು ಗಾಳಿಯಿಂದ ಸದ್ಯಕ್ಕೆ ಸಾಕಷ್ಟು ಸಮಸ್ಯೆಯಾಗಿದ್ದರೂ ಜಲಾಶಯಗಳು ತುಂಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುತ್ತದೆ”, ಎಂದು ಹೇಳಿದರು.

ಕುಸುಮ್ – ಜಂಟಿ ಸರ್ವೇ

“ಕೃಷಿಗೆ ಸೌರ ಪಂಪ್ ಸೆಟ್ ಗಳನ್ನು ಒದಗಿಸುವ ಕುಸುಮ್ ಬಿ ಯೋಜನೆಯಡಿ ಆನ್ ಲೈನ್ ಮೂಲಕ 26,238 ಅರ್ಜಿಗಳು ಬಂದಿದ್ದು, ಈ ಹಿಂದಿನ ಅನಧಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಅಡಿಯಲ್ಲಿ 10,073 ಬಂದಿರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿರುವವರ ಪಂಪ್ ಸೆಟ್ ಗಳು ಗ್ರಿಡ್ ನಿಂದ 500 ಮೀಟರ್ ಒಳಗೆ ಇದ್ದರೆ ವಿದ್ಯುತ್ ಪಂಪ್ ಸೆಟ್ ಒದಗಿಸಲಾಗುವುದು. ಉಳಿದವರಿಗೆ ಸೌರ ಪಂಪ್ ಸೆಟ್ ಒದಗಿಸಲಾಗುವುದು. ಇದಕ್ಕೆ ಫಲಾನುಭವಿಗಳು ಶೇ. 20ರಷ್ಟು ಅನುದಾನ  ಭರಿಸಿದರೆ ಉಳಿದ ಶೇ. 30ರಷ್ಟನ್ನು ಕೇಂದ್ರ ಸರ್ಕಾರ ಮತ್ತು ಶೇ. 50ನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಬಂದಿರುವ ಅರ್ಜಿಗಳ ಆಧಾರದ ಮೇಲೆ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಈ ಕೆಲಸ ಮುಗಿದ ಕೂಡಲೇ ಪಂಪ್ ಸೆಟ್ ಒದಗಿಸಲಾಗುವುದು,” ಎಂದು ಸಚಿವರು ಮಾಹಿತಿ ನೀಡಿದರು.

ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶತಕ ಕೆ.ಪಿ.ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

RELATED ARTICLES
- Advertisment -
Google search engine

Most Popular