Saturday, April 19, 2025
Google search engine

Homeರಾಜ್ಯಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆಗೆ ಸರ್ಕಾರ ಸುತ್ತೋಲೆ

ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆಗೆ ಸರ್ಕಾರ ಸುತ್ತೋಲೆ

ಬೆಂಗಳೂರು: ಸಂಭ್ರಮ ಶನಿವಾರ ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯ ಹೊರೆಯಾಗಿರದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಈ ಹಿಂದೆ ಆದೇಶಿಸಲಾಗಿದೆ.

2023-24 ನೇ ಸಾಲಿನಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ. ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್‍ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಇದಕ್ಕಾಗಿ ಸಿದ್ಧಪಡಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.

ಈ ಕುರಿತು ಜಿಲ್ಲಾ, ಬ್ಲಾಕ್ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುವ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಸಭೆಗಳಲ್ಲಿ ಮತ್ತು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಕೈಪಿಡಿಯನ್ನು ಡಿಎಸ್‍ಇಆರ್‍ಟಿ ವೆಬ್‍ಸೈಟ್ ನಲ್ಲಿ ಅಪ್‍ಲೋಡ್ ಮಾಡಿದ್ದು, ಸದರಿ ಕಲಿಕಾ ಸಾಮಗ್ರಿಗಳನ್ನು ಉಪಯೋಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲಾ ಶಿಕ್ಷಕ ರಿಗೆ ಮಾಹಿತಿ ಒದಗಿಸುವುದು ಎಂದು ತಿಳಿಸಿದೆ.

ಸಂಭ್ರಮ ಶನಿವಾರ ದಿನದಂದು ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲಿಸುವುದು ಹಾಗೂ ಅಗತ್ಯ ಮಾರ್ಗದರ್ಶನ ನೀಡುವುದು. ಕಾರ್ಯಕ್ರಮದ ಯಶಸ್ಸಿಗೆ ತಮ್ಮೆಲ್ಲರ ಪಾಲ್ಗೊಳ್ಳುವಿಕೆಯನ್ನು ಅಪೇಕ್ಷಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.

2023-24ನೇ ಶೈಕ್ಷಣಿಕ ಸಾಲಿನ ಸಂಭ್ರಮ ಶನಿವಾರ ಆಚರಣೆಗೆ ಸಂಬಂಸಿದ ಜಿಲ್ಲಾ ಹಂತದ ಕ್ರೂಢೀಕೃತ ವರದಿಯನ್ನು ತಿಂಗಳುವಾರು ಸಿದ್ಧಪಡಿಸಿ ಡಿಎಸ್‍ಇಆರ್‍ಟಿ ಕಛೇರಿಯ ಇ.ವಿ.ಜಿ ಶಾಖೆಯ evg.kardsert1@gmail.com ಮೇಲ್‍ಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ- 2020ರಲ್ಲಿ ಬ್ಯಾಗ್ ರಹಿತ ದಿನವನ್ನು ಆಚರಿಸುವ ಕುರಿತು ಕೆಲವು ಶಿಫಾರಸು ಮಾಡಲಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯು 6ರಿಂದ 8ನೇ ತರಗತಿಯ ಅವಧಿಯಲ್ಲಿ, ರಾಜ್ಯಗಳು ಮತ್ತು ಸ್ಥಳೀಯ ಸಮುದಾಯಗಳು ನಿರ್ಧರಿಸಿದಂತೆ ಮತ್ತು ಸ್ಥಳೀಯ ಕೌಶಲ ಅಗತ್ಯಗಳಿಗೆ ಪೂರಕವಾಗಿ ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟಗಾರಿಕೆ, ಕುಂಬಾರಿಕೆ ಮುಂತಾದ ಪ್ರಮುಖ ವೃತ್ತಿಪರ ಕರಕೌಶಲ್ಯಗಳ ಸಮೀಕ್ಷೆ ಮತ್ತು ಮಾಡಿ ಕಲಿಯುವ ಅನುಭವವನ್ನು ನೀಡುವ ಒಂದು ಮೋಜಿನ ಕೋರ್ಸ್‍ನ್ನು ತೆಗೆದುಕೊಳ್ಳುತ್ತಾನೆ.

ಶಿಕ್ಷಣ ನೀತಿಯ ಚೌಕಟ್ಟನ್ನು ರೂಪಿಸುವಾಗ 6-8ನೇ ತರಗತಿಗಳಿಗಾಗಿ ಅಭ್ಯಾಸ ಆಧಾರಿತ ಪಠ್ಯಕ್ರಮವನ್ನು ಎನ್‍ಸಿಆರ್‍ಇಟಿ ಸೂಕ್ತವಾಗಿ ವಿನ್ಯಾಸಗೊಳಿಸುತ್ತದೆ. 6-8ನೇ ತರಗತಿಯ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು 10 ದಿನಗಳ ಬ್ಯಾಗ್ ರಹಿತ ಅವಧಿಯಲ್ಲಿ ಭಾಗವಹಿಸುತ್ತಾರೆ.

ಅಲ್ಲಿ ಅವರು ಸ್ಥಳೀಯ ವೃತ್ತಿಪರ ತಜ್ಞರಾದ ಬಡಗಿಗಳು, ತೋಟಗಾರರು, ಕುಂಬಾರರು, ಕಲಾವಿದರು ಮುಂತಾದವರೊಂದಿಗೆ ತರಬೇತಿ ಪಡೆಯುತ್ತಾರೆ. ಆನ್‍ಲೈನ್ ವಿಧಾನದಲ್ಲಿಯೂ ಸಹ ವೃತ್ತಿಪರ ಕೋರ್ಸ್‍ಗಳು ಲಭ್ಯವಾಗುವಂತೆ ಮಾಡಲಾಗುವುದು. ಕಲೆ, ರಸಪ್ರಶ್ನೆಗಳು, ಕ್ರೀಡೆಗಳು ಮತ್ತು ವೃತ್ತಿಪರ ಕರಕೌಶಲ್ಯವನ್ನು ವಸ್ತುಗಳನ್ನು ಒಳಗೊಂಡ ವಿವಿಧ ರೀತಿಯ ಪುಷ್ಟೀಕರಣ ಚಟುವಟಿಕೆಗಳಿಗಾಗಿ ವರ್ಷವಿಡೀ ಬ್ಯಾಗ್ ರಹಿತ ದಿನಗಳನ್ನುಪ್ರೋತ್ಸಾಹಿಸಲಾಗುತ್ತದೆ.

ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಪ್ರಾಮುಖ್ಯತೆಯ ಸ್ಥಳಗಳು/ ಸ್ಮಾರಕಗಳಿಗೆ ಭೇಟಿ ನೀಡುವುದು, ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಭೇಟಿ ಮಾಡುವುದು ಮತ್ತು ಅವರ ಗ್ರಾಮ/ ತಹಸೀಲ್/ ಜಿಲ್ಲೆ/ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಮಕ್ಕಳಿಗೆ ಶಾಲೆಯ ಹೊರಗಿನ ಚಟುವಟಿಕೆಗಳ ಅನುಭವ ಒದಗಿಸಲಾಗುವುದು.

RELATED ARTICLES
- Advertisment -
Google search engine

Most Popular