ನವದೆಹಲಿ: ೧೯೮೩ ರ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಮಾಜಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ಅವರನ್ನು ಯುಪಿಎಸ್ಸಿಯ ಹೊಸ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಾಳೆ ಆ.೧ರ ಗುರುವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಒಂದು ತಿಂಗಳ ಹಿಂದೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷ ಮನೋಜ್ ಸೋನಿ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದರು. ಮನೋಜ್ ಸೋನಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಪ್ರೀತಿ ಸುಡಾನ್ ೨೦೨೨ ರಿಂದ ಯುಪಿಎಸ್ಸಿ ಸದಸ್ಯರಾಗಿದ್ದಾರೆ.
ಪ್ರೀತಿ ಸುಡಾನ್ ಆಂಧ್ರಪ್ರದೇಶ ಕೇಡರ್ (೧೯೮೩) ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿ. ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ಅವರ ಅಧಿಕಾರಾವಧಿ ಜುಲೈ ೨೦೨೦ ರಲ್ಲಿ ಕೊನೆಗೊಂಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಕೆಲಸ ಮಾಡುವುದರ ಹೊರತಾಗಿ, ಪ್ರೀತಿ ರಕ್ಷಣಾ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಕೇಡರ್ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಹಣಕಾಸು, ಯೋಜನೆ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ ಮತ್ತು ಕೃಷಿಯ ಉಸ್ತುವಾರಿ ವಹಿಸಿದ್ದರು. ಪ್ರೀತಿ ಸುಡಾನ್ ಅವರು ವಿಶ್ವಬ್ಯಾಂಕ್ ನ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ.