Monday, April 21, 2025
Google search engine

Homeಅಪರಾಧಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ ನಿಧನ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ ನಿಧನ

ನವದೆಹಲಿ: ದೀರ್ಘಕಾಲದಿಂದ ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ (೭೧) ನಿನ್ನೆ ನಿಧನರಾದರು. ಲಂಡನ್‌ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕಳೆದ ತಿಂಗಳು ಭಾರತಕ್ಕೆ ಮರಳಿದ್ದರು.

ಅವರ ಚಿಕಿತ್ಸೆಗಾಗಿ ಈಚೆಗಷ್ಟೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ೧ ಕೋಟಿ ನೆರವು ನೀಡಿತ್ತು. ಬಲಗೈ ಬ್ಯಾಟರ್ ಆಗಿದ್ದ ಗಾಯಕವಾಡ್ ಅವರು ಭಾರತ ತಂಡದಲ್ಲಿ ೪೦ ಟೆಸ್ಟ್ ಮತ್ತು ೧೫ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ೨೦೬ ಪ್ರಥಮ ದರ್ಜೆ ಪಂದ್ಯಗಳಲ್ಲಿಯೂ ಆಡಿದ್ದರು. ೧೯೭೫ ರಿಂದ ೧೯೮೭ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಂಶುಮನ್ ಅವರು ಭಾರತ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಶಾರ್ಜಾದಲ್ಲಿ ೧೯೯೮ರಲ್ಲಿ ನಡೆದಿದ್ದ ಟೂರ್ನಿ ಮತ್ತು ೧೯೯೯ರಲ್ಲಿ ದೆಹಲಿಯಲ್ಲಿ ಅನಿಲ್ ಕುಂಬ್ಳೆ ೧೦ ವಿಕೆಟ್ ಗಳಿಸಿದ್ದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಂಶುಮಾನ್ ಕೋಚ್ ಆಗಿದ್ದರು.

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಹೆಲ್ಮೆಟ್ ಕಡ್ಡಾಯವಾಗುವ ಮುಂಚಿನ ಕಾಲಘಟ್ಟದಲ್ಲಿ ದಿಟ್ಟ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅವರು ಸುನಿಲ್ ಗಾವಸ್ಕರ್ ಜೊತೆಗೆ ಇನಿಂಗ್ಸ್ ಆರಂಭಿಸುತ್ತಿದ್ದರು. ಆರಂಭಿಕ ಬ್ಯಾಟರ್ ಸ್ಥಾನಕ್ಕಾಗಿ ಅವರು ಚೇತನ್ ಚೌಹಾಣ್ ಅವರೊಂದಿಗಿನ ಪೈಪೋಟಿ ಕ್ರಿಕೆಟ್ ವಲಯದಲ್ಲಿ ಈಗಲೂ ಚರ್ಚೆಯ ವಿಷಯವಾಗಿದೆ. ಜಲಂಧರ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರು ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನದ ಎದುರು ದ್ವಿಶತಕ ಗಳಿಸಿದ್ದರು. ಆ ಸಮಯದಲ್ಲಿ ಅತಿ ನಿಧಾನಗತಿಯ ದ್ವಿಶತಕವೆಂದು ದಾಖಲಾಗಿತ್ತು. ೧೯೭೬ರಲ್ಲಿ ಜಮೈಕಾದ ಸಬಿನಾ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ನಲ್ಲಿ ದೈತ್ಯ ಬೌಲರ್ ಮೈಕೆಲ್ ಹೋಲ್ಡಿಂಗ್ ಅವರ ಬೌನ್ಸರ್ ಗಾಯಕವಾಡ್ ಅವರ ಕಿವಿಗೆ ತಗುಲಿ ಗಾಯವಾಗಿತ್ತು. ಅವರ ಕಿವಿಯಿಂದ ರಕ್ತ ಒಸರಿತ್ತು.

ಪಂದ್ಯದ ನೋಡಲು ಬಂದಿದ್ದ ಸ್ಥಳೀಯ ಅಭಿಮಾನಿಗಳು, `ಕಿಲ್ ಹಿಮ್ ಮಾನ್.. ಕಿಲ್ ಹಿಮ್ ಮೈಕಿ ಎಂದು ಕೂಗಿದ್ದರು’ ಎಂದು ಗಾವಸ್ಕರ್ ಕೆಲವು ಕಾರ್ಯಕ್ರಮಗಳಲ್ಲಿ ನೆನಪಿಸಿಕೊಂಡಿದ್ದಾರೆ. ಅಂಶುಮನ್ ಅವರು ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿ, ಬರೋಡಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯರಾಗಿದ್ದರು.

RELATED ARTICLES
- Advertisment -
Google search engine

Most Popular